NEET ರದ್ದುಗೊಳಿಸಲಾಗುವುದು: ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ತಮಿಳುನಾಡು ಸಿಎಂ ಸ್ಟಾಲಿನ್

Update: 2023-08-14 08:39 GMT

ಹೊಸದಿಲ್ಲಿ: ಚೆನ್ನೈನ 19 ವರ್ಷದ ಎಂಬಿಬಿಎಸ್ ಆಕಾಂಕ್ಷಿಯೊಬ್ಬ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ಸೀಟು ಪಡೆಯಲು ವಿಫಲರಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳ ಬಳಿಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು NEET ಅನ್ನು ರದ್ದುಗೊಳಿಸುವುದಾಗಿ ವಿದ್ಯಾರ್ಥಿಗಳಿಗೆ ಸೋಮವಾರ ಭರವಸೆ ನೀಡಿದ್ದಾರೆ.

ಯಾವುದೇ ರೀತಿಯ ಆತ್ಮಹತ್ಯಾ ಪ್ರವೃತ್ತಿಯನ್ನು ಬೆಳೆಸಿಕೊಳ್ಳದೆ ಆತ್ಮಸ್ಥೈರ್ಯದಿಂದ ಜೀವನವನ್ನು ಎದುರಿಸಬೇಕು ಎಂದು ಸ್ಟಾಲಿನ್ ಹೇಳಿದರು.

"ಯಾವುದೇ ಸಂದರ್ಭದಲ್ಲೂ ಯಾವುದೇ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ನಾನು ಮನವಿ ಮಾಡುತ್ತೇನೆ. ನಿಮ್ಮ ಬೆಳವಣಿಗೆಗೆ ಅಡ್ಡಿಯಾಗಿರುವ NEET ಅನ್ನು ರದ್ದುಗೊಳಿಸಲಾಗುವುದು. ರಾಜ್ಯ ಸರಕಾರವು ಈ ನಿಟ್ಟಿನಲ್ಲಿ ಕಾನೂನು ಉಪಕ್ರಮದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ'' ಎಂದು ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

19 ವರ್ಷದ ವೈದ್ಯಕೀಯ ಆಕಾಂಕ್ಷಿ ಜಗದೀಶ್ವರನ್ ಚೆನ್ನೈನಲ್ಲಿ ಎರಡು ಬಾರಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ ಆತನ ತಂದೆ ಸೆಲ್ವಂ ಕೂಡ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜ್ಯಪಾಲ ಆರ್.ಎನ್.ರವಿ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ರಾಜಕೀಯ ಬದಲಾವಣೆಗಳು ನಡೆದಾಗ ಕೆಲವೇ ತಿಂಗಳಲ್ಲಿ NEET ತಡೆಗೋಡೆ ಕುಸಿಯಲಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News