ವಯನಾಡ್ ಭೂಕುಸಿತದ ಕುರಿತು ಮೊತ್ತಮೊದಲ ತುರ್ತು ಸಂದೇಶ ರವಾನಿಸಿದ್ದ ಮಹಿಳೆಗೆ ಆಗಿದ್ದೇನು?

Update: 2024-08-05 06:48 GMT

Photo credit: freepressjournal.in

ವಯನಾಡ್: ಜುಲೈ 30ರಂದು ಸಂಭವಿಸಿದ ಭೂಕುಸಿತದ ಕುರಿತು ಮೊತ್ತಮೊದಲ ಸಂದೇಶ ರವಾನಿಸಿದ್ದ ವಯನಾಡ್ ನಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದ ನೀತು ಜೊಜೊ ಎಂಬ ಮಹಿಳೆಯು, ರಕ್ಷಣಾ ತಂಡಗಳು ತಾವಿರುವ ಸ್ಥಳಕ್ಕೆ ಧಾವಿಸುವ ಮುನ್ನವೇ ಮೃತಪಟ್ಟಿರುವ ಮನಕಲಕುವ ಘಟನೆ ನಡೆದಿದೆ.

ಚೂರಲ್ ಮಲ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದ ಮೊದಲ ಅಲೆಯ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದ ನೀತು ಜೊಜೊ, ತನ್ನನ್ನು ಹಾಗೂ ತನ್ನ ಗ್ರಾಮದಲ್ಲಿನ ಒಂದೆರಡು ನೆರೆಹೊರೆಯ ಕುಟುಂಬಗಳನ್ನು ರಕ್ಷಿಸುವಂತೆ ರವಾನಿಸಿದ್ದ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಆ ಧ್ವನಿ ಸಂದೇಶದ ಮುದ್ರಿಕೆಯ ಪ್ರಕಾರ, ಮೊದಲ ಅಲೆಯ ಭೂಕುಸಿತವು ತನ್ನ ಮನೆಯನ್ನು ಅಪ್ಪಳಿಸಿದಾಗ, ತಾವು ಎಂತಹ ಭಯಾನಕ ಸ್ಥಿತಿಯನ್ನು ಎದುರಿಸಿದೆವು ಎಂದು ಆಕೆ ವಿವರಿಸುತ್ತಿರುವುದು ಅದರಲ್ಲಿ ದಾಖಲಾಗಿದೆ.

ನೀತು ಜೊಜೊ ಅವರು ಆ ಸಂದರ್ಭದಲ್ಲಿ ಡಾ. ಮೂಪೆನ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಸದಸ್ಯರೊಬ್ಬರ ಬಳಿ ಈ ಎಲ್ಲ ವಿವರಗಳನ್ನು ಹಂಚಿಕೊಂಡಿದ್ದರು ಹಾಗೂ ಕೂಡಲೇ ನೆರವು ಒದಗಿಸಲಾಗುವುದು ಎಂಬ ಭರವಸೆಯನ್ನು ಅವರಿಂದ ಪಡೆದಿದ್ದರು.

ಆದರೆ, ಚೂರಲ್ ಮಲದಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮುಖ್ಯ ಪ್ರದೇಶವನ್ನು ಸಂಪರ್ಕಿಸುವ ಸೇತುವೆ ಕೊಚ್ಚಿಕೊಂಡು ಹೋಗಿದ್ದರಿಂದ, ಆ್ಯಂಬುಲೆನ್ಸ್ ಹಾಗೂ ವೈದ್ಯಕೀಯ ನೆರವಿನ ಸಿಬ್ಬಂದಿಗಳು ನೀತು ಜೊಜೊ ಅವರ ನಿವಾಸವನ್ನು ತಲುಪಲು ಸಾಧ್ಯವಾಗಿರಲಿಲ್ಲ.

ಅದೃಷ್ಟವಶಾತ್, ನೀತು ಅವರ ಪತಿ ಜೊಜೊ, ಹಸುಗೂಸು ಹಾಗೂ ಅತ್ತೆ ಈ ದುರಂತದಲ್ಲಿ ಪಾರಾಗಿದ್ದಾರೆ. ವಯನಾಡ್ ಭೂಕುಸಿತದ ಬಗ್ಗೆ ಬಹುಶಃ ಮೊತ್ತಮೊದಲ ಬಾರಿಗೆ ಮಾಹಿತಿ ನೀಡಿದ ವ್ಯಕ್ತಿ ನೀತು ಜೊಜೊ ಆಗಿದ್ದು, ಅವರ ಮೃತದೇಹ ಹಲವು ದಿನಗಳ ನಂತರ ಪತ್ತೆಯಾಗಿದೆ.

ಡಾ. ಮೂಪೆನ್ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೀತು ಜೊಜೊ ಸೇರಿದಂತೆ ಒಟ್ಟು ನಾಲ್ಕು ಮಂದಿ ಆಸ್ಪತ್ರೆಯ ಸಿಬ್ಬಂದಿಗಳು ಈ ಭೀಕರ ಭೂಕುಸಿತದಲ್ಲಿ ಮೃತಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News