“ನೆತನ್ಯಾಹು ಕ್ರೂರಿ”: ಗಾಝಾದ ಜನರಿಗೆ ಬೆಂಬಲ ನೀಡಲು ಪ್ರಧಾನಿ ಮೋದಿಗೆ ಸಂಸದ ಉವೈಸಿ ಕರೆ
ಹೈದರಾಬಾದ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ʼರಾಕ್ಷಸʼ ಎಂದು ಕರೆದಿರುವ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ, ಗಾಝಾದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಇಸ್ರೇಲ್‌ನ ಸೇನೆಯು ಗಾಝಾ ನಗರದಲ್ಲಿ ವಾಸಿಸುತ್ತಿರುವ ನಾಗರಿಕರನ್ನು ಸ್ಥಳಾಂತರವಾಗಲು ಇಸ್ರೇಲ್ ಮಿಲಿಟರಿ ಆದೇಶಿಸಿದ ಬೆನ್ನಲ್ಲೇ ಉವೈಸಿಯ ಈ ಹೇಳಿಕೆ ಬಂದಿದೆ.
ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಉವೈಸಿ ಅವರು, ಫೆಲೆಸ್ತೀನ್ ಜನರಿಗೆ ಬೆಂಬಲ ವ್ಯಕ್ತಪಡಿಸಿದ್ದು, ನೆತನ್ಯಾಹು ಅವರನ್ನು ʼಕ್ರೂರಿʼ ಎಂದು ಕರೆದಿದ್ದಾರೆ.
ನಮ್ಮ ದೇಶದ ಒಬ್ಬ ಬಾಬಾ ಮುಖ್ಯಮಂತ್ರಿ ಫೆಲೆಸ್ತೀನ್ ಹೆಸರು ಹೇಳಿಕೊಂಡು ಬಂದವರ ಮೇಲೆ ಕೇಸು ಹಾಕುತ್ತಾರೆ. ನಾನು ಫೆಲೆಸ್ತೀನ್‌ನೊಂದಿಗೆ ನಿಲ್ಲುತ್ತೇನೆ ಎಂದು ಎಂದು ಆದಿತ್ಯನಾಥ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದು ಫೆಲೆಸ್ತೀನ್ ಮುಸ್ಲಿಮರ ದುರವಸ್ಥೆಯನ್ನು ಮಾತ್ರ ಪ್ರತಿನಿಧಿಸುವುದಿಲ್ಲ, ಇದು ಒಗ್ಗಟ್ಟಿನ ಅಗತ್ಯವಿರುವ ದೊಡ್ಡ ಮಾನವೀಯ ಬಿಕ್ಕಟ್ಟನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದ್ದಾರೆ.
ಹಮಾಸ್ ನಡೆಸಿದ ದಾಳಿಯ ಬಳಿಕ ಇಸ್ರೇಲ್ ಯುದ್ಧ ಘೋಷಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪರ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಆದರೆ, ಭಾರತವು ಎಂದಿನ ಸಂಪ್ರದಾಯದಂತೆ ಫೆಲೆಸ್ತೀನ್‌ನ "ಸಾರ್ವಭೌಮ, ಸ್ವತಂತ್ರ" ರಾಜ್ಯ ಸ್ಥಾಪನೆಗೆ ಬೆಂಬಲಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು.
"ಭಾರತವು ಯಾವಾಗಲೂ ಫೆಲೆಸ್ತೀನ್‌ನ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯವಾದ ರಾಜ್ಯವನ್ನು ಸ್ಥಾಪಿಸುವ ಕಡೆಗೆ ನೇರ ಮಾತುಕತೆಗಳ ಪುನರಾರಂಭವನ್ನು ಪ್ರತಿಪಾದಿಸುತ್ತದೆ" ಎಂದು ಬಾಗ್ಚಿ ಹೇಳಿದ್ದರು.