ವೀಸಾ ಉಲ್ಲಂಘನೆ, ಜನಾಂಗೀಯ ತಾರತಮ್ಯಕ್ಕಾಗಿ ನೆಟ್‌ಫ್ಲಿಕ್ಸ್ ವಿರುದ್ಧ ಭಾರತದ ತನಿಖೆ : ವರದಿ

Update: 2024-09-22 15:32 GMT

 PC : Netflix.com

ಹೊಸದಿಲ್ಲಿ : ವೀಸಾ ಉಲ್ಲಂಘನೆಗಳು ಮತ್ತು ಜನಾಂಗೀಯ ತಾರತಮ್ಯ ಆರೋಪಗಳು ಸೇರಿದಂತೆ ಅಮೆರಿಕದ ಸ್ಟ್ರೀಮಿಂಗ್ ಕಂಪನಿ ನೆಟ್‌ಫ್ಲಿಕ್ಸ್‌ನ ಸ್ಥಳೀಯ ಕಾರ್ಯಾಚರಣೆಗಳ ವ್ಯವಹಾರ ಪದ್ಧತಿಯ ಬಗ್ಗೆ ಭಾರತವು ತನಿಖೆ ನಡೆಸುತ್ತಿದೆ ಎನ್ನುವುದನ್ನು ಕಂಪನಿಯ ಮಾಜಿ ಅಧಿಕಾರಿಯೋರ್ವರಿಗೆ ಕಳುಹಿಸಲಾಗಿರುವ ಸರಕಾರಿ ಇಮೇಲ್ ತೋರಿಸಿದೆ.

ಜು.20ರ ಇಮೇಲ್ ತನಿಖೆಯ ವಿವರಗಳನ್ನು ಒಳಗೊಂಡಿದ್ದು, ಇದನ್ನು ಸುದ್ದಿಸಂಸ್ಥೆಯು ಪರಿಶೀಲಿಸಿದೆ. ದಿಲ್ಲಿಯಲ್ಲಿನ ಗೃಹ ಸಚಿವಾಲಯದ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಅಧಿಕಾರಿ ದೀಪಕ್ ಯಾದವ್ ಅವರು ನೆಟ್‌ಫ್ಲಿಕ್ಸ್‌ನ ಭಾರತಕ್ಕಾಗಿ ಉದ್ಯಮ ಮತ್ತು ಕಾನೂನು ವ್ಯವಹಾರಗಳ ಮಾಜಿ ನಿರ್ದೇಶಕಿ ನಂದಿನಿ ಮೆಹ್ತಾರಿಗೆ ಈ ಪತ್ರವನ್ನು ಬರೆದಿದ್ದು, ಇದು ಭಾರತದಲ್ಲಿ ನೆಟ್‌ಫ್ಲಿಕ್ಸ್‌ನ ಉದ್ಯಮ ಪದ್ಧತಿಗೆ ಸಂಬಂಧಿಸಿದ ವೀಸಾ ಮತ್ತು ತೆರಿಗೆ ಉಲ್ಲಂಘನೆಗಳು,ಜನಾಂಗೀಯ ತಾರತಮ್ಯಗಳ ಕಳವಳಗಳ ಕುರಿತಾಗಿದೆ ಎಂದು ತಿಳಿಸಿದ್ದರು. ಮೆಹ್ತಾ 2020ರಲ್ಲಿ ಕಂಪನಿಯನ್ನು ತೊರೆದಿದ್ದರು.

ಅಕ್ರಮವಾಗಿ ತನ್ನ ವಜಾ ಹಾಗೂ ಜನಾಂಗೀಯ ಮತ್ತು ಲಿಂಗ ತಾರತಮ್ಯದ ವಿರುದ್ಧ ತಾನು ಅಮೆರಿಕದಲ್ಲಿ ನೆಟ್‌ಫ್ಲಿಕ್ಸ್ ವಿರುದ್ಧ ಮೊಕದ್ದಮೆಯನ್ನು ನಡೆಸುತ್ತಿದ್ದೇನೆ ಎಂದು ಮೆಹ್ತಾ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಂಪನಿಯು ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದೆ.

ಭಾರತೀಯ ತನಿಖೆಯನ್ನು ಸ್ವಾಗತಿಸುವುದಾಗಿ ಹೇಳಿರುವ ಮೆಹ್ತಾ,ಅಧಿಕಾರಿಗಳು ತಾವು ಕಂಡುಕೊಂಡಿರುವ ಅಂಶಗಳನ್ನು ಬಹಿರಂಗಗೊಳಿಸುತ್ತಾರೆ ಎಂದು ಆಶಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಸರಕಾರವು ಮಾಡಿರುವ ಆರೋಪಗಳನ್ನು ಅವರು ವಿವರಿಸಿಲ್ಲ.

ಭಾರತ ಸರಕಾರದಿಂದ ತನಿಖೆಯ ಬಗ್ಗೆ ಕಂಪನಿಗೆ ತಿಳಿದಿಲ್ಲ ಎಂದು ನೆಟ್‌ಫ್ಲಿಕ್ಸ್ ವಕ್ತಾರರೋರ್ವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News