ಬಾಬಾ ಸಿದ್ದೀಕಿ ಹತ್ಯೆ | ಯೂಟ್ಯೂಬ್ ನೋಡಿ ಬಂದೂಕು ಚಲಾಯಿಸುವುದನ್ನು ಕಲಿತ ಶೂಟರ್‌ಗಳು!

Update: 2024-10-16 09:26 GMT

PC : NDTV 

ಮುಂಬೈ : ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಶೂಟರ್‌ಗಳು ಇಲ್ಲಿನ ಕುರ್ಲಾ ಪ್ರದೇಶದ ಬಾಡಿಗೆ ಮನೆಯಲ್ಲಿ ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ನೋಡುವ ಮೂಲಕ ಬಂದೂಕುಗಳನ್ನು ನಿರ್ವಹಿಸಲು ಕಲಿತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಅಜಿತ್ ಪವಾರ್ ಬಣದ ಎನ್ ಸಿ ಪಿ ಗೆ ಸೇರ್ಪಡೆಗೊಂಡಿದ್ದ ಮಾಜಿ ಕಾಂಗ್ರೆಸ್ ನಾಯಕ ಬಾಬಾ ಸಿದ್ದಿಕ್ (66) ಅವರನ್ನು ಮುಂಬೈನ ನಿರ್ಮಲ್ ನಗರ ಪ್ರದೇಶದಲ್ಲಿ ಅವರ ಶಾಸಕ ಪುತ್ರ ಝೀಶನ್ ಸಿದ್ದೀಕಿ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಶನಿವಾರ ರಾತ್ರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಅಪರಾಧ ವಿಭಾಗವು ಆರೋಪಿಗಳ ವಿಚಾರಣೆಯ ವೇಳೆ, ಪರಾರಿಯಾಗಿದ್ದ ಶಂಕಿತ ಶೂಟರ್ ಶಿವಕುಮಾರ್ ಗೌತಮ್ ಉತ್ತರ ಪ್ರದೇಶದಲ್ಲಿ ಮದುವೆ ಸಮಾರಂಭದಲ್ಲಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಬಂದೂಕುಗಳನ್ನು ಚಲಾಯಿಸುವುದು ಕಲಿತಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಾದ ಗುರ್ಮೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಅವರ ವಿಚಾರಣೆಯ ವೇಳೆ ಗೌತಮ್‌ಗೆ ಬಂದೂಕುಗಳನ್ನು ನಿರ್ವಹಿಸುವ ಜ್ಞಾನವಿದ್ದ ಕಾರಣ ಆತನನ್ನು ‘ಮುಖ್ಯ ಶೂಟರ್’ ಆಗಿ ನೇಮಿಸಲಾಗಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ.

ಕಶ್ಯಪ್ ಮತ್ತು ಸಿಂಗ್ ಅವರು ಕುರ್ಲಾದ ಬಾಡಿಗೆ ಮನೆಯಲ್ಲಿ ಗೌತಮ್ ಅವರಿಂದ ಶೂಟಿಂಗ್ ತರಬೇತಿ ಪಡೆದರು, ಅಲ್ಲಿ ಅವರು ಗುಂಡುಗಳಿಲ್ಲದೇ ಶೂಟಿಂಗ್ ಮಾಡುವುದನ್ನು ಅಭ್ಯಾಸ ಮಾಡಿದ್ದಾರೆ.

ಸುಮಾರು ನಾಲ್ಕು ವಾರಗಳ ಕಾಲ ಯೂಟ್ಯೂಬ್ ವೀಡಿಯೋಗಳನ್ನು ನೋಡುವ ಮೂಲಕ ಅವರು ಬಂದೂಕು ಲೋಡ್ ಮಾಡುವುದು, ಅನ್ ಲೋಡ್ ಮಾಡುವುದನ್ನು ಅಭ್ಯಾಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಎಪ್ರಿಲ್‌ನಲ್ಲಿ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಶಾಮೀಲು ಶಂಕೆ ವ್ಯಕ್ತವಾಗಿತ್ತು. ಹಾಗಾಗಿ ಜೂನ್‌ನಲ್ಲಿ ವಿಚಾರಣೆಗೆ ಒಳಗಾದ ಸಂಚುಕೋರರಲ್ಲಿ ಒಬ್ಬನಾದ ಶುಭಂ ಲೋಂಕರ್ ಮೇಲೆ ಪೊಲೀಸರು ನಿಗಾ ವಹಿಸಿದ್ದರು.

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಅಕೋಟ್ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಜನವರಿಯಲ್ಲಿ ಶುಭಂ ಲೋಂಕರ್ ನನ್ನು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿ ಪೊಲೀಸರು ಹತ್ತಕ್ಕೂ ಹೆಚ್ಚು ಬಂದೂಕುಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಜಾಮೀನಿನ ಮೇಲೆ ಆತ ಬಿಡುಗಡೆಗೊಂಡಿದ್ದ ಎನ್ನಲಾಗಿದೆ.

ಶುಭಂ, ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ನೊಂದಿಗೆ ಸಂಪರ್ಕದಲ್ಲಿದ್ದ ಎನ್ನುವುದು ನಿಗಾ ಇರಿಸಿದ ಸಂದರ್ಭದಲ್ಲಿ ಪೊಲೀಸರ ಗಮನಕ್ಕೆ ಬಂದಿದೆ. ಆದರೆ ಸೆಪ್ಟೆಂಬರ್ 24 ರ ಬಳಿಕ ಆತ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ.

ಆರೋಪಿಗಳು ಸ್ನ್ಯಾಪ್‌ಚಾಟ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಪರಸ್ಪರ ಸಂವಹನ ನಡೆಸುತ್ತಿದ್ದರು ಎಂಬುದು ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಭಂ ಲೋಂಕರ್ ಗೆ ಮೊಬೈಲ್ ಫೋನ್ ಆಪ್ ಗಳ ಬಗ್ಗೆ ಹೆಚ್ಚು ಮಾಹಿತಿ ಇರುವುದು ಆರೋಪಿಗಳಿಗೆ ಕೃತ್ಯ ಎಸಗಲು ನೆರವಾಗಿದೆ. ಸಿದ್ದೀಕಿ ಅವರ ಹತ್ಯೆ ಗೆ ಆರೋಪಿಗಳು ಪರಸ್ಪರ ಸಂವಹನ ಮಾಡಲು ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಮ್‌ ಬಳಸಿದ್ದಾರೆ. ಆ ಮೂಲಕ ಪೊಲೀಸ್ ಕಣ್ಗಾವಲು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News