ವಯನಾಡ್ ಜನತೆ ನನಗೊಂದು ಅವಕಾಶ ನೀಡುತ್ತಾರೆಂದು ನಂಬಿದ್ದೇನೆ: ಪ್ರಿಯಾಂಕಾ ಗಾಂಧಿ

Update: 2024-11-13 10:25 GMT

ಪ್ರಿಯಾಂಕಾ ಗಾಂಧಿ ವಾದ್ರಾ (PTI)

ವಯನಾಡ್: ತಮ್ಮನ್ನು ಪ್ರತಿನಿಧಿಸಲು ವಯನಾಡ್ ಜನತೆ ನನಗೊಂದು ಅವಕಾಶ ನೀಡುತ್ತಾರೆ ಎಂದು ನಾನು ನಂಬಿದ್ದೇನೆ ಎಂದು ಬುಧವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್ ಲೋಕಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ವಿಶ್ವಾಸ ವ್ಯಕ್ತಪಡಿಸಿದರು.

ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಗತಿಯಲ್ಲಿದ್ದು, ಈ ಸಂದರ್ಭದಲ್ಲಿ ವಯನಾಡ್‌ನ ಮತಗಟ್ಟೆಯೊಂದಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಗಾಂಧಿ, ಮೇಲಿನಂತೆ ವಿಶ್ವಾಸ ವ್ಯಕ್ತಪಡಿಸಿದರು.

"ವಯನಾಡ್ ಜನರು ನನಗೆ ತೋರಿದ ಪ್ರೀತಿ ಮತ್ತು ಅಕ್ಕರೆಯಂತೆಯೆ, ಅವರಿಗಾಗಿ ಕೆಲಸ ಮಾಡುವ ಹಾಗೂ ಅವರನ್ನು ಪ್ರತಿನಿಧಿಸುವ ಅವಕಾಶವನ್ನು ನೀಡುತ್ತಾರೆ ಎಂಬುದು ನನ್ನ ನಿರೀಕ್ಷೆಯಾಗಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕೇರಳದಲ್ಲಿ ರಾಜಕೀಯ ಬಿರುಗಾಳಿಯೆಬ್ಬಿಸಿರುವ ವಕ್ಫ್ ಕಾನೂನು ವಿವಾದ ಹಾಗೂ ಭೂಕುಸಿತ ಪೀಡಿತ ವಯನಾಡ್‌ಗೆ ಕೇಂದ್ರದ ನೆರವು ದೊರೆಯದಿರುವ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, "ಈ ವಿವಾದಗಳ ಕುರಿತು ಮಾತನಾಡಲು ಇದು ಸೂಕ್ತ ದಿನವಲ್ಲ" ಎಂದು ಅವರು ಪ್ರತ್ಯುತ್ತರ ನೀಡಿದರು.

"ಇಂದು ಮತದಾನದ ದಿನವಾಗಿದ್ದು, ಎಲ್ಲರೂ ತಮ್ಮ ಪ್ರಜಾಸತ್ತಾತ್ಮಕ ಹಕ್ಕಾದ ಮತ ಚಲಾಯಿಸಲು ಆಗಮಿಸಲಿ ಎಂದು ಬಯಸುತ್ತೇನೆ" ಎಂದು ಹೇಳಿದರು.

2024ರ ಲೋಕಸಭಾ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಿಂದ 3.5 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ, ಅದಕ್ಕೂ ಮುನ್ನ, 2019ರ ಲೋಕಸಭಾ ಚುನಾವಣೆಯಲ್ಲಿ 4.3 ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಶೀಲರಾಗಿದ್ದರು.

Full View

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News