ಬಿಹಾರದಲ್ಲಿ ಎನ್ಐಎ-ಎಟಿಎಸ್ ಕಾರ್ಯಾಚರಣೆ: ಪಿಎಫ್ಐ ‘ಮಾಸ್ಟರ್ ಟ್ರೈನರ್’ ಬಂಧನ
ಪಾಟ್ನಾ: ಬಿಹಾರದ ಭಯೋತ್ಪಾದಕ ನಿಗ್ರಹ ದಳ (ATS) ಹಾಗೂ ರಾಷ್ಟ್ರೀಯ ತನಿಖಾ ಏಜೆನ್ಸಿ (NIA) ಬುಧವಾರ ನಡೆಸಿದ ಜಂಟಿ ಕಾರ್ಯಾಚರಣೆಯೊಂದರಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಇಂಡಿಯಾ (PFI)ದ ‘ಮಾಸ್ಟರ್ ಟ್ರೈನರ್’ ಎಂದು ಆರೋಪಿಸಲಾದ ಯಾಕೂಬ್ ಅಲಿಯಾಸ್ ಸುಲ್ತಾನ್ ಉಸ್ಮಾನ್ ಖಾನ್ ನನ್ನು ಬಂಧಿಸಿದೆ.
ತಮಗೆ ದೊರೆತ ಮಾಹಿತಿಯ ಆಧಾರದಲ್ಲಿ ಕಾರ್ಯಪ್ರವೃತ್ತವಾದ ಎನ್ಐಎ ಹಾಗೂ ಎಟಿಎಸ್ ನ ಜಂಟಿ ತಂಡವು ಚಕಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಾನ್ಸ್ಘಾಟ್ ಗವಾಂಡಾರಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ದಾಳಿ ನಡೆಸಿ ಯಾಕುಬ್ ನನ್ನು ಕಸ್ಟಡಿಗೆ ತೆಗೆದುಕೊಂಡಿದೆ.
ಬಂಧನದ ವೇಳೆ ಆತನಿಂದ ಯಾವುದೇ ಅಕ್ರಮ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆಯೇ ಎಂಬುದು ತಿಳಿದುಬಂದಿಲ್ಲ. ಆನಂತರ ಎನ್ಐಎ ತಂಡವು ಯಾಕೂಬ್ನನ್ನು ಮುಂದಿನ ವಿಚಾರಣೆಗಾಗಿ ಆಜ್ಞಾತ ಸ್ಥಳಕ್ಕೆ ಕರೆದೊಯ್ಯಿತೆಂದು ಮೂಲಗಳು ತಿಳಿಸಿವೆ.
ಯಾಕೂಬ್ ಬಂಧನವನ್ನು ಪೂರ್ವ ಚಂಪಾರಣ್ ಪೊಲೀಸ್ ಅಧೀಕ್ಷಕ ಕಾಂತೇಶ್ ಕುಮಾರ್ ಮಿಶ್ರಾ ದೃಢಪಡಿಸಿದ್ದಾರೆ. ಪಿಎಫ್ಐ ಕಾರ್ಯಕರ್ತನ ವಿರುದ್ಧ ನಡೆದ ಕಾರ್ಯಾಚರಣೆಯ ಸಂದರ್ಭದಲ್ಲಿ ಸಂಪೂರ್ಣ ಸಹಕಾರವನ್ನು ಜಿಲ್ಲಾ ಪೊಲೀಸರು ನೀಡುತ್ತಿದ್ದಾರೆ ಎಂದರು. ಆರೋಪಿ ಯಾಕೂಬ್ ದೀರ್ಘ ಸಮಯದಿದ ತಲೆಮರೆಸಿಕೊಂಡಿದ್ದಾನೆಂದು ಅವರು ಹೇಳಿದರು.
ಚಾಕಿಯಾ ಪಟ್ಟಣದ ಗಾಂಧಿ ಮೈದಾನದಲ್ಲಿ ಪಿಎಫ್ಐನ ನೂತನ ಸದಸ್ಯರಿಗೆ ಯಾಕೂಬ್ತರಬೇತಿಯನ್ನು ನೀಡುತ್ತಿರುವ ದೃಶ್ಯಗಳ ವಿಡಿಯೋ ನಾಲ್ಕು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಮತ್ತು ಬೇಹುಗಾರಿಕಾ ಏಜೆನ್ಸಿಗಳ ಗಮನವನ್ನು ಸೆಳೆದಿತ್ತು ಎನ್ನಲಾಗಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಪಾಟ್ನಾದ ಫೂಲ್ವರೀಶ್ವರ್ ಪ್ರದೇಶದಲ್ಲಿ ಅಝರ್ ಹಾಗೂ ಜಲಾಲುದ್ದೀನ್ ಎಂಬವರನ್ನು ಬಂಧಿಸಿದ ಬಳಿಕ ಲಭ್ಯವಾದ ಮಾಹಿತಿಯ ಹಿನ್ನೆಲೆಯಲ್ಲಿ ಯಾಕೂಬ್ ಬಂಧನವಾಗಿದೆ. ಅಝರ್ ಹಾಗೂ ಜಲಾಲುದ್ದೀನ್ ಬಂಧನದೊಂದಿಗೆ ಪಿಎಫ್ಐನ ಭಯೋತ್ಪಾದನಾ ತರಬೇತಿ ಘಟಕವನ್ನು ಭೇದಿಸಿರುವುದಾಗಿ ಎನ್ಐಎ ಹೇಳಿಕೊಂಡಿತ್ತು.