ಗ್ರಾಮಸ್ಥರ ಮೇಲೆ ಆಕ್ರಮಣ ಮಾಡಿದ್ದು ಎನ್ಐಎ ಅಧಿಕಾರಿಗಳು, ಜನರು ದಾಳಿ ಮಾಡಿಲ್ಲ: ಮಮತಾ ಬ್ಯಾನರ್ಜಿ
ಕೋಲ್ಕತ: ಪೂರ್ವ ಮದೀನಾಪುರ ಜಿಲ್ಲೆಯ ಭೂಪತಿನಗರದಲ್ಲಿ, ಗ್ರಾಮಸ್ಥರ ಮೇಲೆ ದಾಳಿ ನಡೆಸಿದ್ದು ಎನ್ಐಎ ಅಧಿಕಾರಿಗಳೇ ಹೊರತು ಗ್ರಾಮಸ್ಥರು ಅವರ ಮೇಲೆ ಮೇಲೆ ದಾಳಿ ನಡೆಸಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದ್ದಾರೆ.
‘‘2022ರಲ್ಲಿ ಪಟಾಕಿ ಸಿಡಿಸಿದ’’ ಘಟನೆಗೆ ಸಂಬಂಧಿಸಿ ಶನಿವಾರ ಮುಂಜಾನೆ ತನಿಖಾ ಸಂಸ್ಥೆಯು ಗ್ರಾಮಸ್ಥರ ಮನೆಗಳಿಗೆ ಹೋಗಿತ್ತು ಎಂದು ಅವರು ಹೇಳಿದರು. ‘‘ಭೂಪತಿನಗರದ ಮಹಿಳೆಯರು ದಾಳಿ ನಡೆಸಿಲ್ಲ. ಮಹಿಳೆಯರ ಮೇಲೆ ದಾಳಿ ನಡೆಸಿದ್ದು ರಾಷ್ಟ್ರೀಯ ತನಿಖಾ ಸಂಸ್ಥೆ’’ ಎಂದು ದಕ್ಷಿಣ ದೀನಜ್ಪುರ ಜಿಲ್ಲೆಯ ಬಲೂರ್ಘಾಟ್ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಹೇಳಿದರು.
‘‘ತಮ್ಮ ಮೇಲೆ ದಾಳಿ ನಡೆದರೇ ಮಹಿಳೆಯರು ಸುಮ್ಮನಿರುತ್ತಾರೆಯೇ?’’ ಎಂದು ಅವರು ಹೇಳಿದರು. 2022 ಡಿಸೆಂಬರ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಎನ್ಐಎ ಅಧಿಕಾರಿಗಳು ತಮ್ಮ ಮನೆಗಳಿಗೆ ಬಂದಾಗ ಅವರು ಪ್ರತಿಭಟಿಸಿದರು, ಅಷ್ಟೆ’’ ಎಂದರು.
ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರವು ಚುನಾವಣೆ ಗೆಲ್ಲಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
‘‘ಚುನಾವಣಾ ಆಯೋಗವು ನಿಷ್ಪಕ್ಷವಾಗಿ ಕೆಲಸ ಮಾಡಬೇಕೆಂದು ನಾವು ಬಯಸುತ್ತೇವೆ, ಅದು ಬಿಜೆಪಿ ನಿಯಂತ್ರಿಸುತ್ತಿರುವ ಆಯೋಗವಾಗಬಾರದು’’ ಎಂದು ಮಮತಾ ಹೇಳಿದರು.
‘‘ಎನ್ಐಎ, ಸಿಬಿಐ ಬಿಜೆಪಿಯ ಸಹೋದರರು’’:
ರಾಜ್ಯದ ಅಧಿಕಾರಿಗಳನ್ನು ಚುನಾವಣಾ ಆಯೋಗ ವರ್ಗವಣೆಗೊಳಿಸಿರುವುದನ್ನು ಪ್ರಶ್ನಿಸಿದ ಅವರು, ಅನುಷ್ಠಾನ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಅಧಿಕಾರಿಗಳನ್ನು ಅದು ಯಾಕೆ ಬದಲಾಯಿಸಿಲ್ಲ ಎಂದು ಪ್ರಶ್ನಿಸಿದರು. ‘‘ಎನ್ಐಎ, ಸಿಬಿಐ ಬಿಜೆಪಿಯ ಸಹೋದರರು, ಈಡಿ ಮತ್ತು ಆದಾಯ ತೆರಿಗೆ ಇಲಾಖೆಯು ಬಿಜೆಪಿಯ ನಿಧಿ ಸಂಗ್ರಾಹಕರು’’ ಎಂದು ಅವರು ಹೇಳಿದರು.
‘‘ನಿಮಗೆ ಸಾಮರ್ಥ್ಯವಿದ್ದರೆ ಪ್ರಜಾಸತ್ತಾತ್ಮಕ ವಿಧಾನದಲ್ಲಿ ಹೋರಾಡಿ ಚುನಾವಣೆ ಗೆಲ್ಲಿ. ನನ್ನ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಚುನಾವಣಾ ಏಜಂಟ್ಗಳನ್ನು ಬಂಧಿಸಬೇಡಿ’’ ಎಂದು ಅವರು ಹೇಳಿದರು.