ಪಶ್ಚಿಮ ಬಂಗಾಳ | ಎನ್‌ಐಎ ತಂಡದ ಮೇಲೆ ದಾಳಿ, ಕಾರು ಧ್ವಂಸ
ಕೋಲ್ಕತಾ : ಪಶ್ಚಿಮ ಬಂಗಾಳದ ಈಸ್ಟ್ ಮಿಡ್ನಾಪುರ್ ಜಿಲ್ಲೆಯಲ್ಲಿ 2022 ರಲ್ಲಿ ನಡೆದಿದ್ದ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ NIA ತಂಡದ ಮೇಲೆ ಶನಿವಾರ ಭೂಪತಿನಗರದಲ್ಲಿ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಇದರ ಪರಿಣಾಮವಾಗಿ ಇಬ್ಬರು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಇಬ್ಬರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯರನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ನಂತರ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಕಾರನ್ನು ಸಹ ಧ್ವಂಸಗೊಳಿಸಲಾಯಿತು ಎನ್ನಲಾಗಿದೆ.
ಇದೇ ರೀತಿಯ ಘಟನೆ ಜನವರಿ 5 ರಂದು ರಾಜ್ಯದಲ್ಲಿ ವರದಿಯಾಗಿತ್ತು. ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿರುವ ತೃಣಮೂಲ ಕಾಂಗ್ರೆಸ್ ನಾಯಕ ಶಹಜಹಾನ್ ಶೇಖ್ ಅವರ ಮನೆಯಲ್ಲಿ ಶೋಧ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯದ ತಂಡದ ಮೇಲೆ ದಾಳಿ ನಡೆಸಿದಾಗ ಐವರು ಅಧಿಕಾರಿಗಳಿಗೆ ಗಾಯಗಳಾಗಿತ್ತು.
ಮೂಲಗಳ ಪ್ರಕಾರ, 2022 ರ ಡಿಸೆಂಬರ್ 3 ರಂದು ಭೂಪತಿನಗರದ ಮನೆಯೊಂದರಲ್ಲಿ ಮೂವರನ್ನು ಕೊಂದ ಘಟನೆಗೆ ಸಂಬಂಧಿಸಿದಂತೆ ಎನ್‌ಐಎ ಇಬ್ಬರು ನಿವಾಸಿಗಳಾದ ಬಲೈ ಮೈತಿ ಮತ್ತು ಮನೋಬ್ರತಾ ಜನ ಅವರನ್ನು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿತ್ತು. ಅವರು ವಿಚಾರಣೆಗೆ ಹಾಜರಾಗದ ಕಾರಣ, ಎನ್‌ಐಎ ಅಧಿಕಾರಿಗಳು ಶನಿವಾರ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಕರೆದೊಯ್ದರು.
ಮಾರ್ಗಮಧ್ಯೆ, ಉದ್ರಿಕ್ತ ಗ್ರಾಮಸ್ಥರು ಎನ್‌ಐಎ ವಾಹನವನ್ನು ಸುತ್ತುವರೆದು ಟಿಎಂಸಿ ಸದಸ್ಯರಾದ ಮೈತಿ ಮತ್ತು ಜನ ಕಾರಿನಿಂದ ಹೊರಬರುವಂತೆ ಘೇರಾವ್ ಹಾಕಿದ್ದಾರೆ. ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಜನರು ಎನ್‌ಐಎ ಅಧಿಕಾರಿಗಳಿದ್ದ ವಾಹನದ ಗಾಜುಗಳು ಒಡೆದಿದ್ದು, ಇಬ್ಬರು ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.