ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆ ಪ್ರಕರಣ; ಶಂಕಿತರ ಬಂಧನ: ವರದಿ
ಒಟ್ಟಾವ, ಕೆನಡಾ: ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತನನ್ನು ಕಳೆದ ವರ್ಷ ಬ್ರಿಟಿಷ್ ಕೊಲಂಬಿಯಾದಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಪೊಲೀಸರು ಶುಕ್ರವಾರ ಬಾಡಿಗೆ ಹಂತಕರ ತಂಡದ ಸದಸ್ಯರನ್ನು ಬಂಧಿಸಿದೆ ಎಂದು ಕೆನಡಾ ಬ್ರಾಡ್ ಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.
ಕೆನಡಾದಲ್ಲಿ ಕೆಲ ತಿಂಗಳ ಹಿಂದೆಯೇ ಈ ಶಂಕಿತರನ್ನು ಪೊಲೀಸರು ಗುರುತಿಸಿದ್ದು, ಅವರ ಮೇಲೆ ತೀವ್ರ ಕಣ್ಗಾವಲು ಇರಿಸಿತ್ತು ಎಂದು ಸಿಬಿಸಿ ಹೇಳಿದೆ. ಈ ಬಗ್ಗೆ ರಾಯಲ್ ಕೆನಡಿಯನ್ ಮೌಂಟೆಟ್ ಪೊಲೀಸರು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ಸರ್ಕಾರದ ಏಜೆಂಟುಗಳು ಷಾಮೀಲಾಗಿದ್ದಾರೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಕಳೆದ ಸೆಪ್ಟೆಂಬರ್ ನಲ್ಲಿ ಆರೋಪಿಸಿದ್ದರು. ಭಾರತ ಇದನ್ನು ನಿರಾಕರಿಸಿತ್ತು. ಪ್ರಕರಣದ ತನಿಖೆಯಲ್ಲಿ ಸಹಕರಿಸುವಂತೆ ಭಾರತವನ್ನು ಕೆನಡಾ ಒತ್ತಾಯ ಮಾಡುತ್ತಲೇ ಬಂದಿತ್ತು. ಅಮೆರಿಕದ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿಯ ಹತ್ಯೆ ಸಂಚನ್ನು ವಿಫಲಗೊಳಿಸಿದ್ದಾಗಿ ಅಮೆರಿಕ ಆ ಬಳಿಕ ಹೇಳಿಕೆ ನೀಡಿತ್ತು.
ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿಗಳ ಇರುವಿಕೆ ಭಾರತಕ್ಕೆ ಹತಾಶೆ ಉಂಟುಮಾಡಿದ್ದು, ನಿಜ್ಜರ್ನನ್ನು ಭಾರತ ಉಗ್ರಗಾಮಿ ಎಂದು ಘೋಷಿಸಿತ್ತು.