"ಯಾವುದೇ ಶೀತಲ ಸಮರವಿಲ್ಲ": ಮಹಾಯುತಿ ಸರಕಾರದಲ್ಲಿ ಆಂತರಿಕ ಬಿಕ್ಕಟ್ಟು ಎಂಬ ವರದಿಗಳ ಕುರಿತು ಏಕನಾಥ್ ಶಿಂಧೆ ಸ್ಪಷ್ಟನೆ

Update: 2025-02-19 12:43 IST
Photo of Eknath Shinde

ಏಕನಾಥ್ ಶಿಂಧೆ (PTI)

  • whatsapp icon

ಮುಂಬೈ: ತಮ್ಮ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ, “ಎಲ್ಲವೂ ತಂಪುತಂಪಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಮಹಾಯುತಿ ಸರಕಾರದಲ್ಲಿ ಆಂತರಿಕ ಬಿಕ್ಕಟ್ಟಿದೆ ಎಂಬ ವದಂತಿಗಳನ್ನು ನಿರಾಕರಿಸಿದ ಅವರು, ನಾನು ಯಾವುದೇ ಸಮಾನಾಂತರ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ ಎಂದೂ ಹೇಳಿದ್ದಾರೆ.

ಮುಂಬೈನಲ್ಲಿ ಆಯೋಜನೆಗೊಂಡಿದ್ದ ಶಿವಸೇನೆ ಸಂಸದರು, ಶಾಸಕರು ಹಾಗೂ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಏಕನಾಥ್ ಶಿಂಧೆ, ಒಂದು ವೇಳೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿರದಿದ್ದರೆ, ಶಿವಸೇನೆ ವಿಭಜನೆಯಾಗುತ್ತಿರಲಿಲ್ಲ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕೂಡಾ ಉಪ ಮುಖ್ಯಮಂತ್ರಿಗಳ ವೈದ್ಯಕೀಯ ನೆರವು ಘಟಕವನ್ನು ಸ್ಥಾಪಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.

ಅದು (ಶಿಂಧೆ ಸ್ಥಾಪಿಸಿರುವ ಘಟಕ) ಮುಖ್ಯಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿಯೊಂದಿಗೆ ಸಮನ್ವಯ ಸಾಧಿಸಲಿದ್ದು, ಬಡವರು ಹಾಗೂ ಅಗತ್ಯವಿರುವ ರೋಗಿಗಳಿಗೆ ನೆರವು ಒದಗಿಸಲಿದೆ. ಇದರಿಂದ ಕೆಲಸಗಳು ಪುನರಾವರ್ತನೆಗೊಳ್ಳುವುದಿಲ್ಲ. ಕೇವಲ ಒಂದೇ ಒಂದು ಮುಖ್ಯಮಂತ್ರಿಗಳ ವಾರ್ ರೂಂ ಇದ್ದು, ಈಗಲೂ ಕೂಡಾ ಆ ವಾರ್ ರೂಂನಿಂದಲೇ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.

ಈ ನಡುವೆ, ಜನರಿಗೆ ನೆರವು ನೀಡುವ ಗುರಿ ಹೊಂದಿರುವುದರಿಂದ, ಏಕನಾಥ್ ಶಿಂದೆ ಮಂತ್ರಾಲಯದಲ್ಲಿ ವೈದ್ಯಕೀಯ ನೆರವು ಘಟಕ ಸ್ಥಾಪಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮರ್ಥಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News