MGNREGS ಗೆ ಹಣದ ಕೊರತೆ ; ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಹೆಚ್ಚುವರಿ ಬಜೆಟ್ ಮೊರೆ
ಅರ್ಧ ಆರ್ಥಿಕ ವರ್ಷದ ನಂತರ ಪ್ರಮುಖ ಗ್ರಾಮೀಣ ಉದ್ಯೋಗ ಕಾರ್ಯಕ್ರಮವಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ MGNREGS ಹಣದ ಕೊರತೆಯಾಗಿದೆ. ಈ ಕುರಿತು ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ನೀಡಿರುವ ಅಂಕಿಅಂಶಗಳ ಪ್ರಕಾರ 6,146.93 ಕೋ. ರೂ. ಕೊರತೆಯಿದೆ ಎಂದು thehindu ವರದಿ ಮಾಡಿದೆ.
2023-24ರ ಯೋಜನೆಗೆ 60,000 ಕೋ. ರೂ. ಮೊತ್ತವನ್ನು ಮಂಜೂರು ಮಾಡಲಾಗಿದೆ, ಇದು 73,000 ಕೋ. ರೂ. ಬಜೆಟ್ ಅಂದಾಜುಗಳಿಗಿಂತ 18% ಕಡಿಮೆ ಮತ್ತು 2022-23 ರ ಆರ್ಥಿಕ ವರ್ಷಕ್ಕೆ 89,000 ಕೋಟಿ ಮಂಜೂರು ಮಾಡಿದ್ದರೂ ಅದು ಪರಿಷ್ಕೃತ ಅಂದಾಜುಗಳಿಗಿಂತ 33% ಕಡಿಮೆಯಾಗಿದೆ.
ಬಲ್ಲ ಮೂಲಗಳ ಪ್ರಕಾರ, ಸೆಪ್ಟೆಂಬರ್ 15 ರಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ 23,000 ಕೋಟಿ ಪೂರಕ ಬಜೆಟ್‌ಗಾಗಿ ಹಣಕಾಸು ಸಚಿವಾಲಯವನ್ನು ಸಂಪರ್ಕಿಸಿತ್ತು. ಪ್ರಸ್ತಾಪದ ಬಗ್ಗೆ ಇನ್ನೂ ಹಣಕಾಸು ಸಚಿವಾಲಯದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮೂಲಗಳು ದೃಢಪಡಿಸಿವೆ.
ಬಜೆಟ್ ಕಡಿತಕ್ಕೆ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, MGNREGS ಬೇಡಿಕೆಗೆ ಅನುಸಾರವಾಗಿ ನಡೆಯುವ ಯೋಜನೆಯಾಗಿದ್ದು, ಅಗತ್ಯವಿದ್ದಾಗ ಪೂರಕ ಬಜೆಟ್ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ಗುರುವಾರ ಹೇಳಿಕೆಯಲ್ಲಿ, ಗ್ರಾಮೀಣಾಭಿವೃದ್ಧಿ ಸಚಿವಾಲಯ ಈ ಅಂಶವನ್ನು ಪುನರುಚ್ಚರಿಸಿದೆ. "ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ MGNREGA ಬೇಡಿಕೆ-ಚಾಲಿತ ಕೂಲಿ ಉದ್ಯೋಗ ಕಾರ್ಯಕ್ರಮವಾಗಿದೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನಿಧಿ ಬಿಡುಗಡೆಯು ನಿರಂತರ ಪ್ರಕ್ರಿಯೆಯಾಗಿದೆ. ಕೇಂದ್ರ ಸರ್ಕಾರವು ಕೆಲಸದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹಣವನ್ನು ಬಿಡುಗಡೆ ಮಾಡುತ್ತದೆ” ಎಂದು ಅದು ಹೇಳಿದೆ.
ಅಕ್ಟೋಬರ್ 4 ರವರೆಗಿನ ಅಂಕಿಅಂಶಗಳನ್ನು ಉಲ್ಲೇಖಿಸಿದ ಸಚಿವಾಲಯ, ಮಂಜೂರಾದ 60,000 ಕೋಟಿಗಳಲ್ಲಿ 56,105.69 ಕೋಟಿ, ಅಂದರೆ 93.5% ಹಣವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. ಆದರೂ, ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸಚಿವಾಲಯದ ಅಂಕಿಅಂಶಗಳ ವರದಿ (7.1.1%) 6,146 ಕೋ. ರೂ. ಕೊರತೆಯನ್ನು ತೋರಿಸುತ್ತದೆ. ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಶೈಲೇಶ್ ಕುಮಾರ್ ಸಿಂಗ್ ಅವರಿಗೆ ಈ ಬಗ್ಗೆ ಕೇಳಿದರೂ ಮಾಹಿತಿ ಸಿಗಲಿಲ್ಲ.
"ಇದು ಪ್ರತಿ ವರ್ಷವೂ ತಪ್ಪದೆ ಪುನರಾವರ್ತಿಸುವ ಕಥೆಯಾಗಿದೆ. ಪ್ರತಿ ವರ್ಷವೂ ಬಜೆಟ್ ಕಡಿತಗಳಿವೆ. MGNREGS ಬೇಡಿಕೆ-ಚಾಲಿತ ಯೋಜನೆ. ಅಗತ್ಯವಿರುವಾಗ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ನಮಗೆ ತಿಳಿಸಲಾಗಿದೆ. ಸಾಮಾನ್ಯವಾಗಿ ಪೂರಕ ಬಜೆಟ್ ಅನ್ನು ಚಳಿಗಾಲದ ಅಧಿವೇಶನದಲ್ಲಿ ಮಾತ್ರ ಅನುಮೋದಿಸಲಾಗುತ್ತದೆ” ಎಂದು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಶಿಕ್ಷಣ ತಜ್ಞರು ಮತ್ತು ಕಾರ್ಯಕರ್ತರ ಒಕ್ಕೂಟ ಲಿಬ್ಟೆಕ್‌ನ ಸಂಶೋಧಕರಾದ ಲಾವಣ್ಯ ತಮಾಂಗ್ ಹೇಳಿದರು. ವರ್ಷದ ಕೊನೆಯಲ್ಲಿ ಬ್ಯಾಲೆನ್ಸ್ ಶೀಟ್‌ಗಳು ಸರಿಯಾಗಿ ಕಾಣಿಸಬಹುದು. ಆದರೆ ಈ ಅವ್ಯವಸ್ಥೆಯು ಯೋಜನೆಯ ಕಾರ್ಯನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. "ಲಭ್ಯವಿರುವ ನಿಧಿಗಳು ಕುಸಿದಂತೆ, ವೇತನದ ಬಾಕಿಗಳು ಹೆಚ್ಚುತ್ತವೆ ಮತ್ತು ಕೆಲಸದ ಹಂಚಿಕೆ ಕಡಿಮೆಯಾಗುತ್ತದೆ, ಇದು ಕಾರ್ಯಕ್ರಮವನ್ನು ಸ್ಥಗಿತಗೊಳಿಸುತ್ತದೆ" ಎಂದು ಅವರು ಒತ್ತಿ ಹೇಳಿದರು.
2021-22 ಮತ್ತು 2022-23 ರ ನಡುವೆ, MGNREGS ಬಜೆಟ್ ಅನ್ನು 25% ರಷ್ಟು ಕಡಿತಗೊಳಿಸಲಾಗಿತ್ತು. ಕೊರತೆಯನ್ನು ಪೂರೈಸಲು ಹೆಚ್ಚುವರಿ 25,000 ಕೋಟಿಗಳನ್ನು ಹೆಚ್ಚುವರಿ ಬಜೆಟ್ ಗೆ ಒತ್ತಾಯಿಸಲಾಯಿತು, ಆದರೆ ಅದು ಕೇವಲ 16,000 ಕೋ. ರೂ. ಪಡೆಯಲಾಗಿತ್ತು.