ಸಾಮಾನ್ಯ ಪ್ರಕರಣಗಳ ವಿಚಾರಣಾಧೀನ ಕೈದಿಗಳಿಗೆ ಜೈಲಿನ ಬದಲು ಜಿಪಿಎಸ್ ನಿಗಾ, ಒಡಿಶಾ ಪ್ರಸ್ತಾಪ
ಗಂಭೀರವಲ್ಲದ ಪ್ರಕರಣಗಳ ವಿಚಾರಣಾಧೀನ ಕೈದಿಗಳಿಗೆ ಜಿಪಿಎಸ್ ಚಾಲಿತ ಸಾಧನವನ್ನು ಅಳವಡಿಸಲಿರುವ ಭಾರತದ ಪ್ರಥಮ ರಾಜ್ಯವಾಗುತ್ತ ಒಡಿಶಾ ಹೆಜ್ಜೆ ಇಟ್ಟಿದೆ
ಭುವನೇಶ್ವರ: ಗಂಭೀರವಲ್ಲದ ಪ್ರಕರಣಗಳ ವಿಚಾರಣಾಧೀನ ಕೈದಿಗಳಿಗೆ ಜಿಪಿಎಸ್ ಚಾಲಿತ ಸಾಧನವನ್ನು ಅಳವಡಿಸಲಿರುವ ಭಾರತದ ಪ್ರಥಮ ರಾಜ್ಯವಾಗುತ್ತ ಒಡಿಶಾ ಹೆಜ್ಜೆ ಇಟ್ಟಿದೆ.
ಕಾರಾಗೃಹಗಳಲ್ಲಿ ಹೆಚ್ಚುತ್ತಿರುವ ಕೈದಿಗಳ ಸಂಖ್ಯೆಯನ್ನು ಕಡಿಮೆ ಮಾಡಲು, ವಿಚಾರಣಾಧೀನ ಕೈದಿಗಳಿಗೆ ಗೃಹ ಬಂಧನಕ್ಕೆ ಅವಕಾಶ ನೀಡುವ ಯೋಜನೆ ಇದಾಗಿದೆ. ಆ ಮೂಲಕ ಜೈಲುವಾಸಿಗಳಿಗೆ ಸರ್ಕಾರ ಮಾಡುತ್ತಿರುವ ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸುವ ಗುರಿಯನ್ನು ಇದು ಒಳಗೊಂಡಿದೆ.
ಕೈದಿಗಳಿಗೆ ಅಳವಡಿಸಲಿರುವ ಜಿಪಿಎಸ್ ತಂತ್ರಜ್ಞಾನದ ದರವು ರೂ. 10,000ದಿಂದ ರೂ. 15,000 ಆಗಬಹುದು ಎಂದು ಅಂದಾಜಿಸಲಾಗಿದ್ದು, ಇದನ್ನು ಪಾದದ ಕೀಲಿಗೆ ಅಳವಡಿಸಬಹುದಾಗಿದೆ. ಈ ತಂತ್ರಜ್ಞಾನವನ್ನು ಮಾನವ ಹಸ್ತಕ್ಷೇಪಕ್ಕೆ ಅವಕಾಶ ನೀಡದಂತೆ ವಿನ್ಯಾಸಗೊಳಿಸಲಾಗಿದೆ ಎಂದು Times of India ವರದಿ ಮಾಡಿದೆ.
ಉದ್ದೇಶಿತ ತಂತ್ರಜ್ಞಾನಕ್ಕೆ ನಿಗದಿತ ವಲಯ ಅಥವಾ ಪ್ರದೇಶದ ಗಡಿಯನ್ನು ಅಳವಡಿಸಲಾಗಿರುತ್ತದೆ. ಒಂದು ವೇಳೆ ವಿಚಾರಣಾಧೀನ ಕೈದಿಗಳು ಈ ಗಡಿಯನ್ನು ಮೀರಿ ಹೊರಗೆ ಹೋದರೆ, ಈ ಕುರಿತು ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ. ತಕ್ಷಣವೇ ಆರೋಪಿಯ ಜಾಮೀನು ರದ್ದಾಗುತ್ತದೆ. ಜೈಲಿನೊಳಗಿರುವ ಗಂಭೀರ ಪ್ರಕರಣ ಎದುರಿಸುತ್ತಿರುವ ಆರೋಪಿಗಳ ಚಟುವಟಿಕೆಗಳ ಮೇಲೆ ನಿಗಾ ಇಡಲೂ ಈ ತಂತ್ರಜ್ಞಾನ ಸಹಕಾರಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಮಹಾ ನಿರ್ದೇಶಕ (ಕಾರಾಗೃಹ) ಮನೋಜ್ ಕುಮಾರ್ ಛಾಬ್ರಾ, “ ಸಣ್ಣ ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಚಾರಣಾಧೀನ ಕೈದಿಗಳನ್ನು ಗೃಹ ಬಂಧನದಲ್ಲಿಡಲು ಈ ತಂತ್ರಜ್ಞಾನವನ್ನು ಪರಿಚಯಿಸುವಂತೆ ನಾವು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಕಾರಾಗೃಹಗಳಲ್ಲಿ ಹೆಚ್ಚುತ್ತಿರುವ ಕೈದಿಗಳ ಸಂಖ್ಯೆಯನ್ನು ಪರಿಹರಿಸಲು ಈ ಕ್ರಮದ ಪ್ರಸ್ತಾಪ ಮಾಡಲಾಗಿದೆ ಎಂದು ಛಾಬ್ರಾ ತಿಳಿಸಿದ್ದಾರೆ. ಇದಕ್ಕೂ ಮುನ್ನ, ಗರಿಷ್ಠ ಏಳು ವರ್ಷಗಳವರೆಗಿನ ಶಿಕ್ಷೆಯ ಪ್ರಮಾಣ ಹೊಂದಿರುವ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಸಲಹೆ ನೀಡಿತ್ತು. ಒಡಿಶಾ ಕಾರಾಗೃಹಗಳಲ್ಲಿರುವ ವಿಚಾರಣಾಧೀನ ಕೈದಿಗಳ ಪೈಕಿ, ಸುಮಾರು ಶೇ. 65ರಷ್ಟು ಮಂದಿ ಗರಿಷ್ಠ ಏಳು ವರ್ಷಗಳ ಶಿಕ್ಷೆಯ ಪ್ರಮಾಣವನ್ನು ಹೊಂದಿರುವ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
“ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ವಿಚಾರಣಾಧೀನ ಕೈದಿಗಳಿಗೆ ಕಾರಾಗೃಹ ಅಥವಾ ಜಾಮೀನಿನ ಆಯ್ಕೆ ಮುಂದಿಡಬಹುದಾಗಿದೆ. ಜಾಮೀನು ಬಯಸುವವರಿಗೆ ನಿಗಾ ಸಾಧನ ಅಳವಡಿಕೆಯನ್ನು ಕಡ್ಡಾಯಗೊಳಿಸಬಹುದಾಗಿದೆ. ಈ ಸಾಧನಗಳನ್ನು ಸರ್ಕಾರ ಖರೀದಿಸಬೇಕಾದ ಅಗತ್ಯವಿರುವುದಿಲ್ಲ. ಬದಲಿಗೆ, ಆ ಸಾಧನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ವಿಚಾರಣಾಧೀನ ಕೈದಿಗಳಿಗೇ ಖರೀದಿಸುವಂತೆ ಸೂಚಿಸಬಹುದಾಗಿದೆ” ಎಂದೂ ಛಾಬ್ರಾ ಹೇಳಿದ್ದಾರೆ.
ವಿಚಾರಣಾಧೀನ ಕೈದಿಗಳಿಗೆ ಅಳವಡಿಸಲಾಗುವ ಈ ಪಾದದ ಕೀಲಿನ ನಿಗಾ ವ್ಯವಸ್ಥೆಯನ್ನು ಇತ್ತೀಚೆಗೆ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಪ್ರದರ್ಶಿಸಲಾಗಿತ್ತು.