ನಿವೃತ್ತ ನ್ಯಾಯಾಧೀಶರ ಅಭಿಪ್ರಾಯಗಳನ್ನು ಪರಿಗಣಿಸಬೇಕಾದ ಬದ್ಧತೆಯಿಲ್ಲ: ಸಿಜೆಐ ಚಂದ್ರಚೂಡ್
ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಸಂವಿಧಾನದ ಮೂಲರಚನೆ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ ಒಂದು ದಿನದ ಬಳಿಕ, ನಿವೃತ್ತ ನ್ಯಾಯಾಧೀಶರ ಅಭಿಪ್ರಾಯಗಳನ್ನು ಪರಿಗಣಿಸಬೇಕಾದ ಬದ್ಧತೆಯಿಲ್ಲ ಎಂದು ಸುಪ್ರೀಂ ಕೋರ್ಟ್ ನ ಹಾಲಿ ಮುಖ್ಯ ನ್ಯಾಯಾಧೀಶ ನ್ಯಾ. ಡಿ.ವೈ. ಚಂದ್ರಚೂಡ್ ಬುಧವಾರ ಹೇಳಿದ್ದಾರೆ.
ಸಂವಿಧಾನದ ಮೂಲ ರಚನೆಯು ‘‘ಅತ್ಯಂತ ಸಂದೇಹಾಸ್ಪದ ಕಾನೂನು ತಳಹದಿಯನ್ನು’’ ಹೊಂದಿದೆ ಎಂದು ಈಗ ರಾಜ್ಯಸಭಾ ಸದಸ್ಯರಾಗಿರುವ ಗೊಗೊಯ್ ಸೋಮವಾರ ಸದನದಲ್ಲಿ ಹೇಳಿದ್ದರು. ರಾಷ್ಟ್ರ ರಾಜಧಾನಿ ದಿಲ್ಲಿ ಭೂಭಾಗ ಆಡಳಿತ (ತಿದ್ದುಪಡಿ) ಮಸೂದೆಗೆ ಬೆಂಬಲ ವ್ಯಕ್ತಪಡಿಸುತ್ತಾ ಅವರು ತನ್ನ ಅಭಿಪ್ರಾಯ ಹೇಳಿದ್ದರು.
ಬುಧವಾರ ಹಿರಿಯ ವಕೀಲ ಕಪಿಲ್ ಸಿಬಲ್, ಸಂವಿಧಾನದ ಮೂಲ ರಚನೆ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ ಎಂದು ಗೊಗೊಯ್ ಹೆಸರನ್ನು ಉಲ್ಲೇಖಿಸದೆ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಚಂದ್ರಚೂಡ್, ನ್ಯಾಯಾಧೀಶರು ಅಧಿಕಾರದಿಂದ ಹೊರಹೋದ ಬಳಿಕ ಅವರ ಅಭಿಪ್ರಾಯಗಳು ಬದ್ಧತೆಯಿಂದ ಪರಿಗಣಿಸಬೇಕಾದ ಮಾತುಗಳು ಆಗಿರುವುದಿಲ್ಲ ಎಂದು ಹೇಳಿದರು.
‘‘ನೀವು ಸಹೋದ್ಯೋಗಿಯೊಬ್ಬರ ಮಾತುಗಳನ್ನು ಉಲ್ಲೇಖಿಸುವಾಗ, ಅಧಿಕಾರದಲ್ಲಿರುವ ಸಹೋದ್ಯೋಗಿಯ ಮಾತುಗಳನ್ನು ಉಲ್ಲೇಖಿಸಬೇಕು. ನ್ಯಾಯಾಧೀಶರು ನಿವೃತ್ತಿ ಹೊಂದಿದ ಬಳಿಕ, ಅವರ ಮಾತುಗಳು ಅಭಿಪ್ರಾಯಗಳಷ್ಟೆ, ಬದ್ಧತೆಯಿಂದ ಪರಿಗಣಿಸಬೇಕಾದ ಸೂಚನೆಗಳಾಗಿರುವುದಿಲ್ಲ’’ ಎಂದರು.