ಉನ್ನತ ನ್ಯಾಯಾಲಯದ ಆದೇಶದ ವಿರುದ್ಧ ಕೆಳಹಂತದ ನ್ಯಾಯಾಲಯ ಆದೇಶ ಹೊರಡಿಸುವಂತಿಲ್ಲ: ಗುಜರಾತ್ ಹೈಕೋರ್ಟಿಗೆ ಸುಪ್ರೀಂ ತರಾಟೆ
ಹೊಸದಿಲ್ಲಿ: ಮೇಲಿನ ಹಂತದ ನ್ಯಾಯಾಲಯದ ಆದೇಶದ ವಿರುದ್ಧ ಯಾವುದೇ ನ್ಯಾಯಾಲಯ ಆದೇಶ ಹೊರಡಿಸುವುದು ಸಂವಿಧಾನದ ತತ್ವಕ್ಕೆ ವಿರುದ್ಧವಾಗಿದೆ ಎಂದ ಸುಪ್ರೀಂ ಕೋರ್ಟ್ ಇಂದು ಗುಜರಾತ್ ಹೈಕೋರ್ಟ್ ವಿರುದ್ಧ ಕಿಡಿಕಾರಿದೆ.
ಅತ್ಯಾಚಾರ ಸಂತ್ರಸ್ತೆಯೊಬ್ಬರು ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದಿಗೆ ನಿಗದಿಪಡಿಸಿತ್ತು. ಆದರೂ ಗುಜರಾತ್ ಹೈಕೋರ್ಟ್ ಈ ಪ್ರಕರಣ ಕುರಿತಾದ ತೀರ್ಪನ್ನು ಶನಿವಾರ ನೀಡಿತ್ತು. ಹೈಕೋರ್ಟ್ ಅರ್ಜಿದಾರೆಯ ಮನವಿಯನ್ನು ಪುರಸ್ಕರಿಸದೇ ಇದ್ದರೆ ಸುಪ್ರೀಂ ಕೋರ್ಟ್ ಆಕೆಗೆ ಗರ್ಭಪಾತಕ್ಕೆ ಅನುಮತಿ ನೀಡಿದೆ.
“ಗುಜರಾತ್ ಹೈಕೋರ್ಟ್‌ನಲ್ಲೇನಾಗುತ್ತಿದೆ? ಉನ್ನತ ನ್ಯಾಯಾಲಯದ ಆದೇಶದ ವಿರುದ್ಧ ದೇಶದಲ್ಲಿ ಯಾವುದೇ ಇತರ ಕೆಳಗಿನ ಹಂತದ ನ್ಯಾಯಾಲಯ ತೀರ್ಪು ನೀಡುವಂತಿಲ್ಲ.”
ಎಂದು ಜಸ್ಟಿಸ್ ಬಿ ವಿ ನಾಗರತ್ನ ಮತ್ತು ಜಸ್ಟಿಸ್ ಉಜ್ಜಲ್ ಭುಯನ್ ಅವರ ಪೀಠ ಇಂದು ಹೇಳಿದೆ. ಗುಜರಾತ್ ಹೈಕೋರ್ಟ್ ತೀರ್ಪಿನ ಕುರಿತು ಮಾಹಿತಿ ನೀಡುತ್ತಿದ್ದಂತೆಯೇ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಬಂದಿದೆ.
ಶನಿವಾರದ ಆದೇಶವು ಕೇವಲ ಒಂದು “ಕ್ಲರಿಕಲ್ ದೋಷ” ಸರಿಪಡಿಸಲು ನೀಡಲಾಗಿದೆ ಎಂದು ಗುಜರಾತ್ ಸರ್ಕಾರ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. “ಹಿಂದಿನ ಆದೇಶದಲ್ಲಿ ಕ್ಲರಿಕಲ್ ದೋಷವಿತ್ತು, ಅದನ್ನು ಸರಿಪಡಿಸಲು ಶನಿವಾರದ ಆದೇಶ ಹೊರಡಿಸಲಾಗಿದೆ, ಆದೇಶವನ್ನು ವಾಪಸ್ ಪಡೆಯಲು ನ್ಯಾಯಾಧೀಶರಿಗೆ ಕೇಳಲಾಗುವುದು,” ಎಂದು ಅವರು ಹೇಳಿದರು.
ಹೈಕೋರ್ಟಿನ ನಿರ್ಲಕ್ಷ್ಯದ ಧೋರಣೆ ಟೀಕಿಸಿದ ಸುಪ್ರೀಂ ಕೋರ್ಟ್, ಮಹಿಳೆಯ ಅರ್ಜಿಯನ್ನು ಪರಿಗಣಿಸಿ ಗುಜರಾತ್ ಸರ್ಕಾರ ಮತ್ತಿತರರಿಗೆ ನೋಟಿಸ್ ಜಾರಿಗೊಳಿಸಿದೆ.
ಸುಪ್ರೀಂ ಕೋರ್ಟಿನಲ್ಲಿ ಹಾಜರಿದ್ದ 25 ವರ್ಷದ ಸಂತ್ರಸ್ತೆಯ ವಕೀಲೆ ತಮ್ಮ ವಾದ ಮಂಡಿಸಿ ಆಕೆ ಗುಜರಾತ್ ಹೈಕೋರ್ಟ್‌ಗೆ ಆಗಸ್ಟ್ 7ರಂದು ಅರ್ಜಿ ಸಲ್ಲಿಸಿದ್ದರೆ ಮರುದಿನ ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯ ಗರ್ಭಾವಸ್ಥೆ ಮತ್ತು ಆರೋಗ್ಯ ಕುರಿತ ವರದಿಗಾಗಿ ಒಂದು ವೈದ್ಯಕೀಯ ಮಂಡಳಿ ರಚಿಸಬೇಕೆಂದು ಸೂಚಿಸಿತ್ತು. ಈ ಮಂಡಳಿ ಆಗಸ್ಟ್ 10ರಂದು ನೀಡಿದ ವರದಿಯಲ್ಲಿ ಆಕೆಗೆ ಗರ್ಭಪಾತ ಮಾಡಿಸಬಹುದೆಂದು ಹೇಳಿತ್ತು ಎಂದು ತಿಳಿಸಿದರು.
ಗುಜರಾತ್ ಹೈಕೋರ್ಟ್ ಈ ವರದಿಯನ್ನು ಆಗಸ್ಟ್ 11ರಂದು ಪರಿಗಣಿಸಿದ್ದರೂ ಮತ್ತೆ ವಿಚಾರಣೆಯನ್ನು 12 ದಿನಗಳ ನಂತರ ನಿಗದಿಪಡಿಸಿತ್ತು ಹಾಗೂ ಈ ಪ್ರಕರಣದಲ್ಲಿ ಪ್ರತಿಯೊಂದು ದಿನವೂ ಮಹತ್ವದ್ದು ಎಂಬುದನ್ನು ಮರೆತಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆಗಸ್ಟ್ 17ರಂದು ಗುಜರಾತ್ ಹೈಕೋರ್ಟ್ ಸಂತ್ರಸ್ತೆಯ ಅರ್ಜಿಯಲ್ಲಿ ಮಾಡಿದ ವಿನಂತಿಯನ್ನು ತಿರಸ್ಕರಿಸಿದ್ದರೂ ಅದಕ್ಕೆ ಸೂಕ್ತ ಕಾರಣ ನೀಡಿಲ್ಲ.
ಸುಪ್ರೀಂ ಕೋರ್ಟ್ ಮತ್ತೆ ಸಂತ್ರಸ್ತೆಯ ವೈದ್ಯಕೀಯ ತಪಾಸಣೆಗೆ ಸೂಚನೆ ನೀಡಿ ಅದರ ವರದಿಯ ಆಧಾರದಲ್ಲಿ ಇಂದು ಆಕೆಯ ಗರ್ಭಪಾತಕ್ಕೆ ಅನುಮತಿಸಿದೆ.
“ಆಕೆ ಗರ್ಭಕ್ಕೆ 28 ವಾರ ಆಗಿರುವುದರಿಂದ ಒಂದು ವೇಳೆ ಗರ್ಭಪಾತ ಪ್ರಕ್ರಿಯೆಯ ನಂತರವೂ ಭ್ರೂಣ ಜೀವಂತವಿದ್ದರೆ ಅದು ಬದುಕುಳಿಯುವಂತೆ ಮಾಡಲು ಆಸ್ಪತ್ರೆ ಎಲ್ಲಾ ಕ್ರಮ ಕೈಗೊಳ್ಳಬೇಕು ಹಾಗೂ ಕಾನೂನಿನ ಪ್ರಕಾರ ಮಗುವಿನ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನೋಡಿಕೊಳ್ಳಬೇಕು,” ಎಂದು ಸುಪ್ರೀಂ ಕೋರ್ಟ್ ಹೇಳಿದೆ.