ಪ್ರತಿಭಟನಾನಿರತರ ಕುಂದುಕೊರತೆ ಬಗೆಹರಿಸಲು ಸುಪ್ರೀಂ ಕೋರ್ಟ್ ರಚಿಸಿದ್ದ ಸಮಿತಿಯೊಂದಿಗೆ ಮಾತುಕತೆಗೆ ರೈತ ಸಂಘಟನೆಗಳ ನಕಾರ

Update: 2024-09-09 10:42 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಪ್ರತಿಭಟನಾನಿರತ ರೈತರ ಕುಂದುಕೊರತೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಸರ್ವೋಚ್ಚ ನ್ಯಾಯಾಲಯವು ಕಳೆದ ವಾರ ರಚಿಸಿರುವ ಉನ್ನತಾಧಿಕಾರ ಸಮಿತಿಯೊಂದಿಗೆ ಮಾತುಕತೆ ನಡೆಸಲು ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಹೆಚ್ಚಿನ ಆಸಕ್ತಿಯನ್ನು ತೋರಿಸಿಲ್ಲ. ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯ ಕಾನೂನು ಖಾತ್ರಿಯನ್ನು ನೀಡಬೇಕೆಂಬ ಪ್ರಮುಖ ಬೇಡಿಕೆಯನ್ನು ಪರಿಹರಿಸಲು ಈ ಸಮಿತಿಗೆ ಅಧಿಕಾರವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ ಎಂದು ವರದಿಯಾಗಿದೆ.

ರಸ್ತೆ ಸಂಚಾರವನ್ನು ಸುಗಮಗೊಳಿಸಲು ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆಗಳನ್ನು ನಡೆಸಿ ಶಂಭು ಗಡಿಯಿಂದ ತಮ್ಮ ಟ್ರ್ಯಾಕ್ಟರ್‌ಗಳು,ಟ್ರಾಲಿಗಳು ಇತ್ಯಾದಿಗಳನ್ನು ತೆಗೆಯುವಂತೆ ಅವರ ಮನವೊಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೆ.2ರಂದು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ನ್ಯಾ.ನವಾಬ್ ಸಿಂಗ್ ನೇತೃತ್ವದ ಐವರು ಸದಸ್ಯರ ಉನ್ನತಾಧಿಕಾರ ಸಮಿತಿಗೆ ನಿರ್ದೇಶನ ನೀಡಿತ್ತು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾದ ಸಂಚಾಲಕ ಸರ್ವನ್ ಸಿಂಗ್ ಪಂಧೇರ್ ಅವರು,‘ನಮ್ಮ ಎಂಎಸ್‌ಪಿ ಬೇಡಿಕೆಯನ್ನು ಈಡೇರಿಸಲು ಉನ್ನತಾಧಿಕಾರ ಸಮಿತಿಗೆ ಸಾಧ್ಯವಿಲ್ಲ,ಹೀಗಾಗಿ ಅದರೊಂದಿಗೆ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕೇಂದ್ರ ಸಚಿವರ ಸಮಿತಿಯಾಗಿದ್ದರೆ ಮಾತುಕತೆಗಳನ್ನು ನಡೆಸುವುದರಲ್ಲಿ ಸ್ವಲ್ಪವಾದರೂ ರಾಜಕೀಯ ನ್ಯಾಯಸಮ್ಮತತೆ ಇರುತ್ತಿತ್ತು’ ಎಂದು ಹೇಳಿದರು.

ಆದರೂ,ಸರ್ವೋಚ್ಚ ನ್ಯಾಯಾಲಯವು ನೇಮಕಗೊಳಿಸಿರುವ ಉನ್ನತಾಧಿಕಾರ ಸಮಿತಿಯು ತಮ್ಮನ್ನು ಇನ್ನೂ ಮಾತುಕತೆಗೆ ಆಹ್ವಾನಿಸಿಲ್ಲ. ಅವರು ಯಾವುದಾದರೂ ಕಾರ್ಯಸೂಚಿಯೊಂದಿಗೆ ಆಹ್ವಾನಿಸಿದರೆ ಸಂಯುಕ್ತ ಕಿಸಾನ ಮೋರ್ಚಾ(ರಾಜಕೀಯೇತರ)ದೊಂದಿಗೆ ಸಮಾಲೋಚಿಸಿದ ಬಳಿಕವೇ ಆ ಬಗ್ಗೆ ನಿರ್ಧರಿಸುತ್ತೇವೆ ಎಂದೂ ಪಂಧೇರ್ ತಿಳಿಸಿದರು.

ಪಂಧೇರ್ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ ಭಾರತೀಯ ಕಿಸಾನ ಯೂನಿಯನ್(ಶಹೀದ್ ಭಗತ್ ಸಿಂಗ) ವಕ್ತಾರ ತೇಜವೀರ್ ಸಿಂಗ್ ಅವರು,ಅಂಬಾಲಾ-ಹೊಸದಿಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ತಡೆಗಳನ್ನು ತೆರವುಗೊಳಿಸಲಷ್ಟೇ ಉನ್ನತಾಧಿಕಾರ ಸಮಿತಿಯನ್ನು ರಚಿಸಿರುವಂತೆ ಕಾಣುತ್ತಿದೆ ಎಂದರು.

ಫೆ.೧೩ರಂದು ಭದ್ರತಾ ಪಡೆಗಳು ತಮ್ಮ ‘ದಿಲ್ಲಿ ಚಲೋ’ ಜಾಥಾವನ್ನು ಸ್ಥಗಿತಗೊಳಿಸಿದಾಗಿನಿಂದ ಸಾವಿರಾರು ರೈತರು ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಂಜಾಬ ಮತ್ತು ಹರ್ಯಾಣ ಗಡಿಯಲ್ಲಿಯ ಶಂಭು ಮತ್ತು ಖನೌರಿಯಲ್ಲಿ ಬೀಡುಬಿಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News