ವೇಗದ ರೈಲುಗಳನ್ನು ಆರಂಭಿಸುವುದು ಮಾತ್ರವಲ್ಲ, ಪ್ರಯಾಣಿಕರ ದೂರುಗಳನ್ನೂ ವೇಗವಾಗಿ ಪರಿಹರಿಸಬೇಕು: ರೈಲ್ವೇಗೆ ಕೇರಳ ಹೈಕೋರ್ಟ್ ತರಾಟೆ
ಹೊಸದಿಲ್ಲಿ: ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ತಪ್ಪಿ ಹಾರಿಸಿದ ಗುಂಡಿನಿಂದಾಗಿ ಗಾಯಗೊಂಡಿದ್ದ ಪ್ರಯಾಣಿಕರೊಬ್ಬರ ಸಮಸ್ಯೆ ಪರಿಹರಿಸದೇ ಇರುವ ಭಾರತೀಯ ರೈಲ್ವೇಯನ್ನು ಕೇರಳ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
“ರೈಲ್ವೇಯು ವಂದೇ ಭಾರತ್, ರಾಜಧಾನಿ, ಜನ ಶತಾಬ್ದಿಯಂತಹ ವೇಗದ ರೈಲುಗಳನ್ನು ಆರಂಭಿಸುತ್ತಿದೆ. ಆದರೆ ರೈಲ್ವೆಯು ಅಷ್ಟೇ ವೇಗವಾಗಿ ಪ್ರಯಾಣಿಕರ ದೂರುಗಳನ್ನು ಪರಿಹರಿಸಬೇಕು ಮತ್ತು ನಾಗರಿಕರು ದೂರು ಪರಿಹಾರಕ್ಕೆ ನ್ಯಾಯಾಲಯವನ್ನೇರುವುದನ್ನು ಅನಿವಾರ್ಯವನ್ನಾಗಿಸುವ ಬದಲು ಅವರ ಸಮಸ್ಯೆ ಪರಿಹರಿಸಿ ಅವರಲ್ಲಿ ವಿಶ್ವಾಸ ಮೂಡಿಸಬೇಕು,” ಎಂದು ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಅರ್ಜಿದಾರನಿಗೆ ರೂ. 8.2 ಲಕ್ಷ ಪರಿಹಾರ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ.
2012 ರಲ್ಲಿ ತಿರುವನಂತಪುರಂನ ತಂಪನೂರು ರೈಲ್ವೆ ನಿಲ್ದಾಣದ ರಿಸರ್ವೇಶನ್ ಕೌಂಟರ್‌ನತ್ತ ಸಾಗುತ್ತಿದ್ದಾಗ ಅರ್ಜಿದಾರನಿಗೆ ಗುಂಡೇಟು ತಗಲಿತ್ತು. ಅಲ್ಲಿದ್ದ ರೈಲ್ವೆ ಪೊಲೀಸರೊಬ್ಬರ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದ ಕಾರಣ ಆ ಗುಂಡು ಅವರ ಹೊಟ್ಟೆಯ ಭಾಗವನ್ನು ಸೀಳಿತ್ತು. ಈ ಪ್ರಕರಣವನ್ನು ಪರಿಶೀಲಿಸಿದ್ದ ರೈಲ್ವೆ ವಿಶೇಷ ಮಂಡಳಿ ರೂ. 1.20 ಲಕ್ಷ ಪರಿಹಾರ ನೀಡಲು ಮುಂದೆ ಬಂದಿತ್ತು.
ತಾವು ಅನುಭವಿಸಿದ ಯಾತನೆಗೆ ಈ ಪರಿಹಾರ ಕಡಿಮೆಯಾಗಿದೆ ಎಂದು ಸಂತ್ರಸ್ತ ನಂತರ ಹೈಕೋರ್ಟಿನ ಮೊರೆ ಹೋಗಿದ್ದರಲ್ಲದೆ ತಾವು ಈ ಘಟನೆಯ ಕಾರಣ ಖಾಯಂ ಅಂಗ ಊನಕ್ಕೆ ಗುರಿಯಾಗಿದ್ದು ಸಾಮಾನ್ಯ ಜೀವನ ನಡೆಸಲು ಆಗುತ್ತಿಲ್ಲ. ತನಗೆ ರೂ 20 ಲಕ್ಷ ಪರಿಹಾರ ನೀಡಬೇಕೆಂದು ಕೋರಿದ್ದರು.
ಆದರೆ ಸಂತ್ರಸ್ತನಿಗೆ ಈಗಾಗಲೇ ರೂ 1.20 ಲಕ್ಷ ನೀಡಲಾಗಿದೆ ಎಂದು ಹೇಳಿಕೊಂಡು ರೈಲ್ವೆ ಈ ಅರ್ಜಿಯನ್ನು ವಿರೋಧಿಸಿತ್ತು.
ಸಂತ್ರಸ್ತನ ವೈದ್ಯಕೀಯ ದಾಖಲೆಗಳು ಹಾಗೂ ಆತ ಎದುರಿಸಿದ ಸಮಸ್ಯೆಗಳನ್ನು ಪರಿಗಣಿಸಿ ಆತನಿಗೆ ರೂ. 8.2 ಲಕ್ಷ ಪರಿಹಾರ ನೀಡಬೇಕೆಂದು ರೈಲ್ವೇಗೆ ಹೈಕೋರ್ಟ್ ಆದೇಶಿಸಿದೆ.