ಒಡಿಶಾ: ಬಸ್ಕಿ ತೆಗೆಸಿದ ಶಿಕ್ಷಕರು 10 ವರ್ಷದ ವಿದ್ಯಾರ್ಥಿ ಕುಸಿದು ಬಿದ್ದು ಸಾವು

Update: 2023-11-22 16:57 GMT

ಸಾಂದರ್ಭಿಕ ಚಿತ್ರ | Photo: PTI 

ಒಡಿಶಾ: ತರಗತಿ ಸಮಯದಲ್ಲಿ ಆಟವಾಡಿರುವುದಕ್ಕೆ ಶಿಕ್ಷಕರೊಬ್ಬರಿಂದ ಬಸ್ಕಿ ತೆಗೆಯುವ ಶಿಕ್ಷೆಗೆ ಒಳಗಾದ ನಾಲ್ಕನೇ ತರಗತಿ ವಿದ್ಯಾರ್ಥಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಜಾಜ್ಪುರ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಮಂಗಳವಾರ ಸಂಭವಿಸಿದೆ.

ಒರಾಲಿಯಲ್ಲಿರುವ ಸೂರ್ಯ ನಾರಾಯಣ ನೋಡಲ್ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿರುವ ರುದ್ರ ನಾರಾಯಣ ಸೇಥಿ ತರಗತಿ ಅವಧಿಯಲ್ಲಿ ನಾಲ್ವರು ಸಹಪಾಠಿಗಳೊಂದಿಗೆ ಮೈದಾನದಲ್ಲಿ ಆಟವಾಡುತ್ತಿದ್ದ. ಇದನ್ನು ನೋಡಿದ ಶಿಕ್ಷಕರೊಬ್ಬರು ರುದ್ರ ನಾರಾಯಣ ಸೇಥಿಗೆ ಬಸ್ಕಿ ತೆಗೆಯುವ ಶಿಕ್ಷೆ ನೀಡಿದ್ದರು.

ಈ ಸಂದರ್ಭ ರುದ್ರ ನಾರಾಯಣ ಸೇಥಿ ಕುಸಿದು ಬಿದ್ದಿದ್ದಾನೆ. ಕೂಡಲೇ ರಸೂಲ್ಪುರ ಬ್ಲಾಕ್ನ ಒರಾಲಿ ಗ್ರಾಮದ ಸಮೀಪದ ನಿವಾಸಿಯಾಗಿರುವ ಆತನ ಹೆತ್ತವರಿಗೆ ಮಾಹಿತಿ ನೀಡಲಾಗಿತ್ತು. ಅನಂತರ ಬಾಲಕನ ಹೆತ್ತವರು ಹಾಗೂ ಶಿಕ್ಷಕರು ಬಾಲಕನನ್ನು ಸಮೀಪದ ಸಮುದಾಯ ಕೇಂದ್ರಕ್ಕೆ, ಅಲ್ಲಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಂತಿಮವಾಗಿ ಕತಕ್ನಲ್ಲಿರುವ ಎಸ್ಸಿಬಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ಕೊಡೊಯ್ದರು. ಆದರೆ, ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಮಂಗಳವಾರ ರಾತ್ರಿ ಪ್ರಕಟಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಸೂಲ್ಪುರ ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ನಿಲಾಂಬರ ಮಿಶ್ರಾ, ತಾನು ಇದುವರೆಗೆ ಯಾವುದೇ ಔಪಚಾರಿಕ ದೂರು ಸ್ವೀಕರಿಸಿಲ್ಲ. ಔಪಚಾರಿಕ ದೂರು ಸ್ವೀಕರಿಸಿದರೆ, ತನಿಖೆ ಆರಂಭಿಸುತ್ತೇನೆ ಹಾಗೂ ತಪ್ಪೆಸಗಿದವರ ವಿರುದ್ಧ ಅಗತ್ಯದ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ರಸೂಲ್ಪುರ ಬ್ಲಾಕ್ನ ಉಪ ಶಿಕ್ಷಣಾಧಿಕಾರಿ ಪ್ರವಾಂಜನ್ ಪಾಟಿ ಶಾಲೆಗೆ ಭೇಟಿ ನೀಡಿದ್ದಾರೆ ಹಾಗೂ ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News