ಬಿಜೆಡಿ ಜೊತೆಗೆ ಮೈತ್ರಿ ಅನುಮಾನ: ಏಕಾಂಗಿ ಸ್ಪರ್ಧೆಗೆ ಮುಂದಾದ ಬಿಜೆಪಿ

Update: 2024-03-09 02:28 GMT

File photo: PTI

ಹೊಸದಿಲ್ಲಿ: ಒಡಿಶಾದಲ್ಲಿ ಬಿಜು ಜನತಾದಳ ಜತೆ ಮೈತ್ರಿ ಮಾಡಿಕೊಳ್ಳುವ ಬಿಜೆಪಿ ಪ್ರಸ್ತಾವಕ್ಕೆ ತೀವ್ರ ಹಿನ್ನಡೆ ಉಂಟಾಗಿದ್ದು, ಪಕ್ಷ ಏಕಾಂಗಿಯಾಗಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗೆ ಸ್ಪರ್ಧಿಸುವ ಸುಳಿವು ನೀಡಿದೆ.

ಉಭಯ ಪಕ್ಷಗಳು ಪರಸ್ಪರ ಬೇಡಿಕೆಗೆ ಋಣಾತ್ಮಕವಾಗಿ ಸ್ಪಂದಿಸಿರುವುದರಿಂದ ಆಡಳಿತಾರೂಢ ಬಿಜೆಪಿ ಜತೆಗಿನ ಮಾತುಕತೆಗೆ ಹಿನ್ನಡೆಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಡಿಶಾ ಬಿಜೆಪಿ ಅಧ್ಯಕ್ಷ ಮನಮೋಹನ ಸಮಲ್ ಅವರು ಶುಕ್ರವಾರ ದೆಹಲಿ ಭೇಟಿ ಮುಗಿಸಿ ಸ್ವರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಮೈತ್ರಿ ಪ್ರಶ್ನೆಯೇ ಇಲ್ಲ. ಬಿಜೆಪಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಮುಂಬರುವ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಬಗ್ಗೆ ಕೇಂದ್ರ ಮುಖಂಡರ ಜತೆ ಚರ್ಚಿಸಲು ದೆಹಲಿಗೆ ತೆರಳಿದ್ದೆವು. ಮೈತ್ರಿ ಅಥವಾ ಸ್ಥಾನ ಹಂಚಿಕೆ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ" ಎಂದು ಅವರು ಹೇಳಿದ್ದಾರೆ. ಒಡಿಶಾ ಬಿಜೆಪಿ ತನ್ನದೇ ಸ್ವಂತ ಬಲದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಕೇಂದ್ರ ನಾಯಕರ ಜತೆ ಮೈತ್ರಿ ಮಾತುಕತೆಗಾಗಿ ಗುರುವಾರ ಸಂಜೆ ವಿಶೇಷ ವಿಮಾನದಲ್ಲಿ ದೆಹಲಿಗೆ ಆಗಮಿಸಿದ್ದ ಬಿಜೆಡಿ ಮುಖಂಡರಾದ ವಿ.ಕೆ.ಪಾಂಡ್ಯನ್ ಮತ್ತು ಪ್ರಣಬ್ ಪ್ರಕಾಶ್ದಾಸ್ ಕೂಡಾ ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಎರಡೂ ಪಕ್ಷಗಳು ಮೈತ್ರಿಗೆ ಒಪ್ಪಿಕೊಂಡಿದ್ದರೂ, ಸ್ಥಾನಗಳಲ್ಲಿ ಹೆಚ್ಚಿನ ಪಾಲು ಬೇಡಿರುವ ಕಾರಣದಿಂದ ಒಪ್ಪಂದಕ್ಕೆ ಬರುವುದು ಸಾಧ್ಯವಾಗಿಲ್ಲ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಬಿಜೆಡಿ ರಾಜ್ಯ ವಿಧಾನಸಭೆಯ 147 ಸ್ಥಾನಗಳ ಪೈಕಿ 100ಕ್ಕೂ ಅಧಿಕ ಸ್ಥಾನಗಳಿಗೆ ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ. ಅಂತೆಯೇ ಬಿಜೆಪಿ 21 ಲೋಕಸಭಾ ಕ್ಷೇತ್ರಗಳ ಪೈಕಿ 14ಕ್ಕೆ ಬೇಡಿಕೆ ಮುಂದಿಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News