ಕೇಂದ್ರ ಬಜೆಟ್ ನಲ್ಲಿ ರೈಲ್ವೆ ಕುರಿತು ಒಮ್ಮೆ ಮಾತ್ರ ಪ್ರಸ್ತಾಪ
ಹೊಸದಿಲ್ಲಿ: ತಮ್ಮ 2024-25ನೇ ಸಾಲಿನ ಬಜೆಟ್ ಭಾಷಣದಲ್ಲಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇವಲ ಒಮ್ಮೆ ಮಾತ್ರ ಭಾರತೀಯ ರೈಲ್ವೆ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು monrycontrol.com ವರದಿ ಮಾಡಿದೆ.
ಬಜೆಟ್ ಭಾಷಣದ ಸಂದರ್ಭದಲ್ಲಿ ಆಂಧ್ರಪ್ರದೇಶ ಪುನರ್ವಿಂಗಡಣೆ ಕಾಯ್ದೆ ಕುರಿತು ಮಾತನಾಡಿದ ನಿರ್ಮಲಾ ಸೀತಾರಾಮನ್, "ಈ ಕಾಯ್ದೆಯಡಿ, ವಿಶಾಖಪಟ್ಟಣಂ-ಚೆನ್ನೈ ಕೈಗಾರಿಕಾ ಕಾರಿಡಾರ್ ಮಾರ್ಗದಲ್ಲಿರುವ ಕೊಪ್ಪರ್ತಿ ನೋಡ್ ಹಾಗೂ ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಮಾರ್ಗದಲ್ಲಿರುವ ಒರ್ವಕಾಲ್ ನೋಡ್‌ಗಳಲ್ಲಿ ಕೈಗಾರಿಕಾಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ನೀರು, ವಿದ್ಯುತ್, ರೈಲ್ವೆ ಹಾಗೂ ರಸ್ತೆಗಳಿಗಂತಹ ಅಗತ್ಯ ಮೂಲಸೌಕರ್ಯಗಳಿಗಾಗಿ ನಿಧಿಯನ್ನು ಒದಗಿಸಲಾಗುವುದು" ಎಂದು ಹೇಳಿದರು.
2024-25ನೇ ಸಾಲಿನಲ್ಲಿ ರೈಲ್ವೆ ಕುರಿತು ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದು ಅದೊಂದೇ ಬಾರಿಯಾಗಿತ್ತು.
ರೈಲ್ವೆ ಬಜೆಟ್ ಕುರಿತು ನಿರ್ಮಲಾ ಸೀತಾರಾಮನ್ ಕೆಲವು ಮಹತ್ವದ ಘೋಷಣೆಗಳನ್ನು ಮಾಡಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಮಧ್ಯಂತರ ಬಜೆಟ್‌ನಲ್ಲಿ ರೈಲ್ವೆಗೆ ಮೀಸಲಿರಿಸಲಾಗಿದ್ದ ಮೊತ್ತವನ್ನೇ ಈ ಬಜೆಟ್‌ನಲ್ಲೂ ಉಳಿಸಿಕೊಳ್ಳಲಾಗಿದೆ. ಇದರಿಂದ ರೈಲ್ವೆ ವಲಯದ ಹಲವು ಪ್ರಮುಖ ಬೇಡಿಕೆಗಳು ಹಾಗೇ ಉಳಿದುಕೊಂಡಿವೆ. ಈ ಪೈಕಿ ನಿಗದಿತ ಅವಧಿಯಲ್ಲಿ ಮೂರು ಆರ್ಥಿಕ ಕಾರಿಡಾರ್‌ಗಳನ್ನು ನಿರ್ಮಿಸುವುದು, ರೈಲು ರಸ್ತೆ ಸಂಪರ್ಕ ಸೇರಿದಂತೆ ಉತ್ತಮ ತಂತ್ರಜ್ಞಾನಕ್ಕಾಗಿ ಬಂಡವಾಳ ವೆಚ್ಚವನ್ನು ಏರಿಕೆ ಮಾಡುವುದು ಹಾಗೂ ರೈಲ್ವೆ ಅಪಘಾತಗಳನ್ನು ಸ್ವಯಂಚಾಲಿತವಾಗಿ ನಿಯಂತ್ರಿಸಲು ಸುರಕ್ಷತೆಯ ಕಡೆಗೆ ಹೆಚ್ಚು ಗಮನ ನೀಡುವುದು ಸೇರಿತ್ತು.