ಬಿಹಾರದಲ್ಲಿ ಪ್ರತಿಪಕ್ಷಗಳ ಸ್ಥಾನ ಹಂಚಿಕೆ ಅಂತಿಮ: RJD 26, ಕಾಂಗ್ರೆಸ್ 9, ಎಡರಂಗ 5 ಕ್ಷೇತ್ರಗಳಲ್ಲಿ ಸ್ಪರ್ಧೆ
ಪಾಟ್ನಾ: ಬಿಹಾರದ ಪ್ರತಿಪಕ್ಷಗಳ ಮೈತ್ರಿಕೂಟವಾದ ‘ಮಹಾಘಟಬಂಧನ್’ ತನ್ನ ಅತಿ ದೊಡ್ಡ ಪಕ್ಷವಾದ ಆರ್‌ಜೆಡಿ ರಾಜ್ಯದ ಒಟ್ಟು 40 ಲೋಕಸಭಾ ಕ್ಷೇತ್ರಗಳಲ್ಲಿ 26ರಲ್ಲಿ ಸ್ಪರ್ಧಿಸಲಿದೆ ಎಂದು ಶುಕ್ರವಾರ ಘೋಷಿಸಿದೆ.
ಕಾಂಗ್ರೆಸ್ 9 ಸ್ಥಾನಗಳಲ್ಲಿ, ಸಿಪಿಐ (ಎಂಎಲ್) 3 ಸ್ಥಾನಗಳಿಗೆ ಹಾಗೂ ಸಿಪಿಐ ಹಾಗೂ ಸಿಪಿಐ(ಎಂ) ತಲಾ 1 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಅದು ತಿಳಿಸಿದೆ.
ಕಾಂಗ್ರೆಸ್ ಪುರೇನಾ ಲೋಕಸಭಾ ಸ್ಥಾನವನ್ನು ಆರ್ಜೆಡಿಗೆ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಇತ್ತೀಚೆಗೆ ಪಕ್ಷ ಸೇರಿದ ರಂಜಿತ್ ರಂಜನ್ ಅವರ ಪತಿ ಪಪ್ಪು ಯಾದವ್ ಅವರು ಸ್ಪರ್ಧಿಸುವ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಈ ಕ್ಷೇತ್ರದಿಂದ ಟಿಕೆಟ್ ನೀಡುವುದಾಗಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯ ಮೊದಲ ಹಂತದ ನಾಮಪತ್ರ ಸಲ್ಲಿಕೆ ಮುಗಿದ ಒಂದು ದಿನದ ಬಳಿಕ ‘ಮಹಾಘಟಬಂಧನ್’ ಸ್ಥಾನ ಹಂಚಿಕೆಯನ್ನು ಘೋಷಿಸಿದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಆರ್ಜೆಡಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್ಜೆಡಿಯ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯ ಸಭಾ ಸದಸ್ಯ ಮನೋಜ್ ಜಾ, ಈಗಾಗಲೇ ಹಂಚಿಕೆ ಮಾಡಿರುವ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಗಮನಾರ್ಹ ವಿಚಾರವೆಂದರೆ, ಸಿಪಿಐ ಹಾಗೂ ಸಿಪಿಐ (ಎಂ) ಈಗಾಗಲೇ ಬೇಗುಸರಾಯಿ ಹಾಗೂ ಖಗರಿಯದಿಂದ ಅನುಕ್ರಮವಾಗಿ ಅಭ್ಯರ್ಥಿಗಳನ್ನು ಘೋಷಿಸಿದೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಹಾಗೂ ಇತರ ಮಿತ್ರ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಮಾತನಾಡಿದ ಝಾ, ‘‘ನಾವು ಸರ್ವಾನುಮತದ ತೀರ್ಮಾನಕ್ಕೆ ಬಂದಿದ್ದೇವೆ ಮತ್ತು ನಾವು ಗೆಲ್ಲುತ್ತೇವೆ’’ ಎಂದಿದ್ದಾರೆ.