ಪ್ರಜಾತಾಂತ್ರಿಕ ಹಕ್ಕುಗಳ ಮರುಸ್ಥಾಪನೆಗೆ ಆಗ್ರಹಿಸಿ ಜಮ್ಮುವಿನಲ್ಲಿ ಪ್ರತಿಪಕ್ಷಗಳ ಧರಣಿ
ಜಮ್ಮು : ಜಮ್ಮುಕಾಶ್ಮೀರದಲ್ಲಿ ಪ್ರಜಾತಾಂತ್ರಿಕ ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿ ನ್ಯಾಶನಲ್ ಕಾನ್ಫರೆನ್ಸ್, ಕಾಂಗ್ರೆಸ್ ಹಾಗೂ ಪಿಡಿಪಿ ಸೇರಿದಂತೆ ಕೇಂದ್ರಾಡಳಿತ ಪ್ರದೇಶದ ಪ್ರಮುಖ ಪ್ರತಿಪಕ್ಷಗಳು ಮಂಗಳವಾರ ಜಮ್ಮುವಿನಲ್ಲಿ ಧರಣಿ ನಡೆಸಿದರು.
ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 379ನೇ ವಿಧಿಯನ್ನು 2019ರಲ್ಲಿ ರದ್ದುಪಡಿಸಿದ ಬಳಿಕ ಜಮ್ಮುವಿನಲ್ಲಿ ನಡೆದ ಅತ್ಯಂತ ಬೃಹತ್ ಧರಣಿ ಇದಾಗಿದೆ.
ಜಮ್ಮು ನಗರದ ಹೃದಯಭಾಗದಲ್ಲಿರುವ ಮಹಾರಾಜ ಹರಿಸಿಂಗ್ ಪಾರ್ಕ್ ನಲ್ಲಿ ಮೂರು ತಾಸುಗಳ ಕಾಲ ನಡೆದ ಧರಣಿ ನೇತೃತ್ವವನ್ನು ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ವಹಿಸಿದ್ದರು. ಆದರೆ ಅನಾರೋಗ್ಯದ ಕಾರಣದಿಂದಾಗಿ ಅವರಿಗೆ ಬಿಗುಭದ್ರತೆಯಿಂದ ಕೂಡಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ.
ನ್ಯಾಶನಲ್ ಕಾನ್ಫರೆನ್ಸ್ ಜಮ್ಮು ಪ್ರಾಂತೀಯ ಅದ್ಯಕ್ಷ ರತನ್ ಲಾಲ್ ಗುಪ್ತಾ ನೇತೃತ್ವದಲ್ಲಿ ಪಕ್ಷದ ಇತರ ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪಿಡಿಪಿ ಅಧ್ಯಕ್ಷೆ ಹಾಗೂ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕೂಡಾ ಪ್ರತಿಭಟನೆಯಲ್ಲಿ ಭಾಗವಹಿಸಲಿಲ್ಲ. ಆದರೆ ಉಪಾಧ್ಯಕ್ಷ ಅಬ್ದುಲ್ ಹಾಮೀದ್ ಚೌಧುರಿ ಹಾಗೂ ಮಾಜಿ ಎಂಎಲ್ಸಿ ಫಿರ್ದೂಸ್ ಟಕ್ ಸೇರಿದಂತೆ ಹಿರಿಯ ಪಿಡಿಪಿ ನಾಯಕರು ಪಾಲ್ಗೊಂಡಿದ್ದರು. ಸಿಪಿಐ (ಎಂ), ನ್ಯಾಶನಲ್ ಪ್ಯಾಂಥರ್ಸ್ ಪಾರ್ಟಿ (ಎನ್ಪಿಪಿ), ಅವಾಮಿ ನ್ಯಾಶನಲ್ ಕಾನ್ಫರೆನ್ಸ್, ಶಿವಸೇನಾ (ಉದ್ದವ್ಠಾಕ್ರೆ ಬಣ) ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.
ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ ಇರುವುದು, ಚುನಾಯಿತ ಸರಕಾರವನ್ನು ಹೊಂದುವ ತಮ್ಮ ಹಕ್ಕಿಗಾಗಿ ಬೀದಿಗಿಳಿಯುವಂತೆ ಕೇಂದ್ರಾಡಳಿತದ ಜನರನ್ನು ಪ್ರೇರೇಪಿಸಲಿದೆ ಎಂದು ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಉಮರ್ ಅಬ್ದುಲ್ಲಾ ಅವರು ಸೋಮವಾರ ಹೇಳಿದ್ದರು.