ಚುನಾವಣಾ ಬಾಂಡ್ ತೀರ್ಪಿನ ನಂತರ ಸಾಮಾಜಿಕ ಜಾಲತಾಣ ಪೋಸ್ಟ್‌ಗಳ ಬಗ್ಗೆ ದೂರಿದ ಕೇಂದ್ರದ ಪರ ವಕೀಲರ ವಾದ ತಿರಸ್ಕರಿಸಿದ ಸುಪ್ರೀಂ
ಹೊಸದಿಲ್ಲಿ: ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಅಜೆಂಡಾ ಆಗಿ “ದುರುಪಯೋಗ ಪಡಿಸಲಾಗುತ್ತಿದೆ” ಎಂಬ ಕೇಂದ್ರ ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ. ತನ್ನ ತೀರ್ಪನ್ನು ಮೂರನೇ ಪಕ್ಷಗಳು ಹೇಗೆ ವ್ಯಾಖ್ಯಾನಿಸುತ್ತವೆ ಎಂಬ ವಿಚಾರದ ಬಗ್ಗೆ ತನಗೆ ಯಾವುದೇ ಪರಿವೆಯಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ನ್ಯಾಯಾಧೀಶರುಗಳಾಗಿ ನಾವು ಕಾನೂನಿನಂತೆ ಹಾಗೂ ಸಂವಿಧಾನದ ಆಶಯದಂತೆ ಕೆಲಸ ಮಾಡುತ್ತೇವೆ. ನ್ಯಾಯಾಧೀಶರಾಗಿ ನಮ್ಮ ಕುರಿತೂ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿವೆ, ಆದರೆ ಇವುಗಳನ್ನೆಲ್ಲಾ ಸಹಿಸಿಕೊಳ್ಳುವಷ್ಟು ಅಗಲವಾದ ತೋಳುಗಳು ನಮಗಿವೆ. ನಮ್ಮ ತೀರ್ಪಿನ ಪಾಲನೆಗಾಗಿ ನಾವು ನಿರ್ದೇಶನಗಳನ್ನು ಮಾತ್ರ ನೀಡುತ್ತೇವೆ,” ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.
“ಚುನಾವಣಾ ಬಾಂಡ್‌ಗಳ ಕುರಿತ ಮಾಹಿತಿಯನ್ನು ಆಧರಿಸಿ ಸರ್ಕಾರವನ್ನು ಗುರಿಯಾಗಿಸುವ ಯತ್ನ ನಡೆಯುತ್ತಿದೆ ಮತ್ತು ಸುಪ್ರೀಂ ಕೋರ್ಟಿಗೂ ಮುಜುಗರ ತರಲಾಗುತ್ತಿದೆ" ಎಂದು ಕೇಂದ್ರ ಪರ ವಕೀಲ ಹರೀಶ್ ಸಾಳ್ವೆ ಹೇಳಿದರು.
“ಮುಜುಗರ ಸೃಷ್ಟಿಸುವ ಸಾಮಾಜಿಕ ಜಾಲತಾಣ ಪೋಸ್ಟ್‌ಗಳ ಮಹಾಪೂರವೇ ಇದೆ. ಜನರು ತಮಗೆ ಬೇಕಿದ್ದಂತೆ ಅಂಕಿಅಂಶಗಳನ್ನು ತಿರುಚಬಹುದು. ಅಂಕಿಅಂಶಗಳ ಆಧಾರದಲ್ಲಿ ಏನನ್ನು ಬೇಕಾದರೂ ಪೋಸ್ಟ್ ಮಾಡಬಹುದು,” ಎಂದು ಅವರು ಹೇಳಿದರು.