ಮಣಿಪುರ ಹಿಂಸಾಚಾರದಿಂದ 14,000ಕ್ಕೂ ಅಧಿಕ ಶಾಲಾ ಮಕ್ಕಳು ಸ್ಥಳಾಂತರ: ಶಿಕ್ಷಣ ಸಚಿವಾಲಯ
ಹೊಸದಿಲ್ಲಿ: ಮಣಿಪುರದ ಜನಾಂಗೀಯ ಹಿಂಸಾಚಾರದಲ್ಲಿ 14,000ಕ್ಕೂ ಅಧಿಕ ಶಾಲಾ ಮಕ್ಕಳು ಸ್ಥಳಾಂತರಗೊಂಡಿದ್ದಾರೆ ಎಂದು ಶಿಕ್ಷಣ ಸಚಿವಾಲಯ ಬುಧವಾರ ಹೇಳಿದೆ.
ಇವರಲ್ಲಿ ಶೇ. 93 ಮಕ್ಕಳನ್ನು ಸಮೀಪದ ಶಾಲೆಗಳಲ್ಲಿ ದಾಖಲಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಖಾತೆಯ ಸಹಾಯಕ ಸಚಿವೆ ಅನ್ನಪೂರ್ಣ ದೇವಿ ರಾಜ್ಯ ಸಭೆಯಲ್ಲಿ ನೀಡಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘‘ಪ್ರಸಕ್ತ ಮಣಿಪುರ ಪರಿಸ್ಥಿತಿಯಿಂದ ಒಟ್ಟು 14,763 ಶಾಲಾ ಮಕ್ಕಳು ಸ್ಥಳಾಂತರಗೊಂಡಿದ್ದಾರೆ. ಸ್ಥಳಾಂತರಗೊಂಡ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಪ್ರತಿ ಪರಿಹಾರ ಕೇಂದ್ರಗಳಲ್ಲಿ ನೋಡಲ್ ಅಧಿಕಾರಿಯನ್ನು ನಿಯೋಜಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.
ಶೇ. 93.5ಕ್ಕೂ ಅಧಿಕ ಸ್ಥಳಾಂತರಗೊಂಡ ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗಳಲ್ಲಿ ಉಚಿತವಾಗಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪರಿಶಿಷ್ಟ ಪಂಗಡದ ಸ್ಥಾನ ಮಾನ ನೀಡುವಂತೆ ಆಗ್ರಹಿಸುತ್ತಿರುವ ಮೈತೈ ಸಮುದಾಯದ ವಿರುದ್ಧ ಮಣಿಪುರದಲ್ಲಿ ‘ಬುಡಕಟ್ಟು ಏಕತಾ ರ್ಯಾಲಿ’ ಆಯೋಜಿಸಿದ ಬಳಿಕ ಮೇ 3ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು.