ಪ್ರೀತಿಗಾಗಿ ಪಾಕಿಸ್ತಾನ ಜೈಲು ಸೇರಿದ ಆಲಿಗಢದ ಪ್ರೇಮಿ!

Update: 2025-01-03 02:42 GMT

ಸಾಂದರ್ಭಿಕ ಚಿತ್ರ

ಆಲಿಗಢ: ಪಾಕ್ ಯುವತಿಯೊಂದಿಗೆ ಗಡಿಯಾಚೆಗಿನ ಪ್ರೇಮ ಸಂಬಂಧ ಬೆಳೆಸಿದ ಕಾರಣಕ್ಕೆ ಆಲಿಗಢದ 21 ವರ್ಷದ ಯುವಕನೊಬ್ಬ ಪಾಕಿಸ್ತಾನದಲ್ಲಿ ಸೆರೆವಾಸಕ್ಕೊಳಗಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಅಧಿಕೃತ ಕಾನೂನಾತ್ಮಕ ದಾಖಲೆಗಳಿಲ್ಲದೆ ಗಡಿಯನ್ನು ದಾಟಿದ ಆರೋಪದ ಮೇಲೆ ಬಾದಲ್ ಬಾಬು ಎಂಬ ಯುವಕನನ್ನು ಡಿಸೆಂಬರ್ 28ರಂದು ಪಾಕಿಸ್ತಾನದ ಪ್ರಾಧಿಕಾರಗಳು ಬಂಧಿಸಿವೆ ಎಂದು ಅವರು ಹೇಳಿದ್ದಾರೆ.

ಈ ಆಘಾತಕಾರಿ ಅನಿರೀಕ್ಷಿತ ಘಟನೆಯ ಮಾಹಿತಿ ಮಾಧ್ಯಮಗಳ ಮೂಲಕ ಬಾಬು ಸ್ವಗ್ರಾಮಕ್ಕೆ ತಲುಪಿದೆ. ನಮ್ಮ ಪುತ್ರ ದಿಲ್ಲಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಭಾವಿಸಿದ್ದ ಆತನ ಪೋಷಕರು, ಪಾಕಿಸ್ತಾನದ ಸುದ್ದಿ ಪೋರ್ಟಲ್ ಒಂದರಲ್ಲಿ ತಮ್ಮ ಪುತ್ರ ಬಂಧಿತನಾಗಿರುವ ಸುದ್ದಿ ತಿಳಿದು ಆಘಾತಕ್ಕೊಳಗಾಗಿದ್ದಾರೆ.

ನಮ್ಮ ಪುತ್ರನ ಬಂಧನದ ಸುದ್ದಿಯು ಸಾಮಾಜಿಕ ಮಾಧ್ಯಮಗಳ ಮೂಲಕ ತಿಳಿಯಿತು ಎಂದು ಬಾರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಖಿತ್ಕಾರಿ ಗ್ರಾಮದ ನಿವಾಸಿಯಾದ ಬಾಬುವಿನ ತಂದೆ ಕೃಪಾಲ್ ಸಿಂಗ್ ತಿಳಿಸಿದ್ದಾರೆ.

“ನಮಗೆ ಇದನ್ನು ನಂಬಲಾಗುತ್ತಿಲ್ಲ. ನಾವು ಈ ಕ್ಷಣದವರೆಗೆ ಆತ ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದೇ ನಂಬಿದ್ದೆವು. ಆದರೆ, ಮರುಕ್ಷಣವೇ ಆತ ಪಾಕಿಸ್ತಾನದ ಜೈಲಿನಲ್ಲಿ ಬಂಧಿತನಾಗಿದ್ದಾನೆ ಎಂಬ ಸುದ್ದಿ ತಿಳಿದು ಆಘಾತಕ್ಕೊಳಗಾಗಿದ್ದೇವೆ. ಇದೊಂದು ರೀತಿಯಲ್ಲಿ ಸಿನಿಮಾ ಕತೆಯಂತಿದೆ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಸದ್ಯ ಬಾಬುವಿನ ಕುಟುಂಬದ ಸದಸ್ಯರು ಭಾರತ ಸರಕಾರ, ನಿರ್ದಿಷ್ಟವಾಗಿ ಪ್ರಧಾನಿ ನರೇಂದ್ರ ಮೋದಿಗೆ ಮಧ್ಯಪ್ರವೇಶಕ್ಕೆ ಮನವಿ ಮಾಡಿದ್ದು, ತಮ್ಮ ಪುತ್ರನನ್ನು ಬಿಡುಗಡೆಗೊಳಿಸಲು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

“ನಮಗೆ ನಮ್ಮ ಪುತ್ರ ಮನೆಗೆ ಮರಳುವುದು ಬೇಕಿದೆ ಹಾಗೂ ಆತನನ್ನು ವಾಪಸು ಕರೆ ತರುವುದು ಹೇಗೆ ಎಂಬುದು ನಮಗೆ ತಿಳಿದಿಲ್ಲ. ನಮಗೆ ನೆರವು ನೀಡುವಂತೆ ನಾವು ಪ್ರಧಾನಿಗೆ ಮನವಿ ಮಾಡಿದ್ದೇವೆ” ಎಂದು ಬಾಬು ತಾಯಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

“ಆತ ಸರಳ ಯುವಕನಾಗಿದ್ದು, ಈ ಹಿಂದೆಂದೂ ಇಂತಹ ಕೆಲಸವನ್ನು ಮಾಡಿರಲಿಲ್ಲ” ಎಂದೂ ಅವರು ಹೇಳಿದ್ದಾರೆ.

ಬಾಬು ಕುಟುಂಬದ ಸದಸ್ಯರಿಂದ ನಾವು ಮನವಿ ಪತ್ರ ಸ್ವೀಕರಿಸಿದ್ದು, ನಾವು ಈ ವಿಷಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತಂದಿದ್ದೇವೆ ಎಂದು ಆಲಿಗಢ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅಮೃತ್ ಜೈನ್ ದೃಢಪಡಿಸಿದ್ದಾರೆ.

“ಏನೆಲ್ಲ ಸೂಕ್ತ ಮಾರ್ಗಗಳ ಮೂಲಕ ನೆರವಿನ ಅಗತ್ಯವಿದೆಯೊ, ಆ ಎಲ್ಲ ಮಾರ್ಗಗಳ ಮೂಲಕ ನಾವು ಪ್ರಯತ್ನಿಸಲಿದ್ದೇವೆ ಹಾಗೂ ಬಾಬುವಿನೊಂದಿಗೆ ಸಂಪರ್ಕ ಸಾಧಿಸುವ ಯತ್ನ ಮಾಡಲಿದ್ದೇವೆ. ಆತನನ್ನು ಪಾಕಿಸ್ತಾನದ ಜೈಲಿನಿಂದ ಬಿಡುಗಡೆಗೊಳಿಸುವುದು ನಮ್ಮ ಪ್ರಾಥಮಿಕ ಗುರಿಯಾಗಿದೆ” ಎಂದೂ ಅವರು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.

ಬಾಬು ಕುಟುಂಬದ ಮೂಲಗಳ ಪ್ರಕಾರ, ಆತ ಫೇಸ್ ಬುಕ್ ನಲ್ಲಿ ಸಕ್ರಿಯವಾಗಿರುತ್ತಿದ್ದ ಹಾಗೂ ಪಾಕಿಸ್ತಾನದ ಯುವತಿಯೋರ್ವಳೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ. ನಾನು ದಿಲ್ಲಿಗೆ ಕೆಲಸಕ್ಕೆ ತೆರಳಲಿದ್ದೇನೆ ಎಂದು ತನ್ನ ಪೋಷಕರಿಗೆ ತಿಳಿಸಿದ್ದ ಬಾಬು, ರಕ್ಷಾ ಬಂಧನದ ನಂತರ ಆಗಸ್ಟ್ ತಿಂಗಳಲ್ಲಿ ಗ್ರಾಮ ತೊರೆದಿದ್ದ ಎಂದು ಹೇಳಲಾಗಿದೆ.

ದೀಪಾವಳಿಗೂ ಮುಂಚೆ ತನ್ನ ಪೋಷಕರಿಗೆ ವಾಟ್ಸ್ ಆ್ಯಪ್ ವಿಡಿಯೊ ಕರೆ ಮಾಡಿರುವ ಬಾಬು, ತಾನು ಸುರಕ್ಷಿತವಾಗಿದ್ದೇನೆ ಎಂದು ಭರವಸೆ ನೀಡಿದ್ದು, ನನಗೆ ಉದ್ಯೋಗ ದೊರೆತಿದ್ದು, ನಾನು ನನ್ನ ಸ್ವಂತ ಮೊಬೈಲ್ ಅನ್ನು ಬಳಸಲು ಸಾಧ್ಯವಾಗದೆ ಇರುವುದರಿಂದ ಸ್ನೇಹಿತನ ಫೋನ್ ನಿಂದ ಕರೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ. ನಂತರ, ಬಾಬು ಜಮ್ಮುವಿನ ಬಳಿಯ ಅಂತಾರಾಷ್ಟ್ರೀಯ ಗಡಿಯನ್ನು ಅದು ಹೇಗೋ ದಾಟಿದ್ದಾನೆ ಎಂಬ ಸಂಗತಿ ಆತನ ಕುಟುಂಬದ ಸದಸ್ಯರಿಗೆ ತಿಳಿದಿದ್ದು, ಈ ವಿವರಗಳು ಇನ್ನೂ ದೃಢಪಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News