ಸಂಸತ್ ಭದ್ರತಾ ಲೋಪ ಪ್ರಕರಣ: ಆರೋಪಿಗಳು ಸ್ವಯಂ ದಹನ, ಇತರ ಆಯ್ಕೆಗಳನ್ನೂ ಪರಿಶೀಲಿಸಿದ್ದರು ; ಅಧಿಕಾರಿಗಳು

Update: 2023-12-16 16:17 GMT

ಲೋಕಸಭೆ | Photo credit: The Quint

ಹೊಸದಿಲ್ಲಿ: ಹೊಗೆ ಡಬ್ಬಿಗಳೊಂದಿಗೆ ಲೋಕಸಭೆಯ ಚೇಂಬರ್ ಗೆ ಜಿಗಿಯುವ ಯೋಜನೆಯನ್ನು ಅಂತಿಮಗೊಳಿಸುವ ಮುನ್ನ ಸ್ವಯಂ ದಹನ ಮತ್ತು ಕರಪತ್ರಗಳ ಹಂಚುವಿಕೆಯ ಆಯ್ಕೆಗಳನ್ನು ತಾವು ಪರಿಶೀಲಿಸಿದ್ದೆವು ಎಂದು ಡಿ.13ರಂದು ಸಂಸತ್ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳು ಬಹಿರಂಗಗೊಳಿಸಿದ್ದಾರೆ ಎಂದು ದಿಲ್ಲಿ ಪೋಲಿಸ್ ಅಧಿಕಾರಿಗಳು ಶನಿವಾರ ತಿಳಿಸಿದರು.

ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ದಿಲ್ಲಿ ಪೋಲಿಸ್ ವಿಶೇಷ ಘಟಕವು ಇಬ್ಬರು ಆರೋಪಿಗಳಿಗೆ ಸದನವನ್ನು ಪ್ರವೇಶಿಸಲು ಸಂದರ್ಶಕರ ಪಾಸ್ ಗಳನ್ನು ನೀಡಿದ್ದ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲೂ ಉದ್ದೇಶಿಸಿದೆ.

ಶೂನ್ಯವೇಳೆಯಲ್ಲಿ ಸಾರ್ವಜನಿಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್ಗೆ ಜಿಗಿದಿದ್ದ ಸಾಗರ್ ಶರ್ಮಾ ಮತ್ತು ಮನೋರಂಜನ್ಡಿ. ಸಂಸದರು ತಮ್ಮನ್ನು ಹಿಡಿಯುವ ಮುನ್ನ ತಮ್ಮ ಬಳಿಯಿದ್ದ ಡಬ್ಬಿಗಳಿಂದ ಹಳದಿ ಹೊಗೆಯನ್ನು ಬಿಡುಗಡೆಗೊಳಿಸಿದ್ದರು ಮತ್ತು ಘೋಷಣೆಗಳನ್ನು ಕೂಗಿದ್ದರು. ಇದೇ ವೇಳೆ ಇತರ ಇಬ್ಬರು ಆರೋಪಿಗಳಾದ ಅಮೋಲ್ ಶಿಂದೆ ಮತ್ತು ನೀಲಂ ದೇವಿ ಅವರು ಸಂಸತ್ ಆವರಣದ ಹೊರಗೆ ‘ತಾನಾಶಾಹಿ ನಹೀ ಚಲೇಗಿ ’ಎಂದು ಘೋಷಣೆಗಳನ್ನು ಕೂಗುತ್ತ ಡಬ್ಬಿಗಳಿಂದ ಬಣ್ಣದ ಹೊಗೆಯನ್ನು ಬಿಡುಗಡೆಗೊಳಿಸಿದ್ದರು.

ಐದನೇ ಆರೋಪಿ ಲಲಿತ್ ಝಾ ಸಂಸತ್ ಸಂಕೀರ್ಣದ ಹೊರಗಿನ ಪ್ರತಿಭಟನೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದ್ದ.

ಲೋಕಸಭೆಯ ಚೇಂಬರ್ಗೆ ಜಿಗಿಯುವ ತಮ್ಮ ಯೋಜನೆಯನ್ನು ಅಂತಿಮಗೊಳಿಸುವ ಮುನ್ನ ಆರೋಪಿಗಳು ತಮ್ಮ ಸಂದೇಶವನ್ನು ಸರಕಾರಕ್ಕೆ ತಲುಪಿಸುವಲ್ಲಿ ಪರಿಣಾಮಕಾರಿಯಾಗಬಹುದಾದ ಕೆಲವು ಮಾರ್ಗಗಳನ್ನು ಅನ್ವೇಷಿಸಿದ್ದರು. ಶರೀರಕ್ಕೆ ಬೆಂಕಿ ನಿರೋಧಕ ಜೆಲ್ ಹಚ್ಚಿಕೊಂಡು ಸ್ವಯಂ ದಹನಕ್ಕೆ ಮೊದಲು ಅವರು ಯೋಜಿಸಿದ್ದರಾದರೂ, ಬಳಿಕ ಅದನ್ನು ಕೈಬಿಟ್ಟಿದ್ದರು. ಸಂಸತ್ತಿನೊಳಗೆ ಕರಪತ್ರಗಳನ್ನು ವಿತರಿಸುವ ಪರ್ಯಾಯವನ್ನೂ ಅವರು ಪರಿಶೀಲಿಸಿದ್ದರು ಎಂದು ದಿಲ್ಲಿ ಪೋಲಿಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಶುಕ್ರವಾರ ಸಂಜೆ ಪೋಲಿಸರು ಆರೋಪಿಗಳನ್ನು ಅವರು ಪರಸ್ಪರ ಭೇಟಿಯಾಗಿದ್ದ ಮತ್ತು ಭದ್ರತೆ ಉಲ್ಲಂಘನೆ ಸಂಚು ರೂಪಿಸಿದ್ದ ವಿವಿಧ ಸ್ಥಳಗಳಿಗೆ ಕರೆದೊಯ್ದಿದ್ದರು. ಭದ್ರತಾ ಲೋಪದ ಘಟನೆಯನ್ನು ಮರುಸೃಷ್ಟಿಸಲು ಪೋಲಿಸರು ಸಂಸತ್ ನ ಅನುಮತಿ ಕೋರುವ ಸಾಧ್ಯತೆಯಿದೆ.

ಝಾ ಪರಾರಿಯಾಗಲು ನೆರವಾಗಿದ್ದ ಮಹೇಶ್ ಕುಮಾವತ್, ಕೈಲಾಷ್ ಅವರಿಗೆ ಪೋಲಿಸರು ಕ್ಲೀನ್ ಚಿಟ್ ನೀಡಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ. ಝಾ ಬುಧವಾರ ಸಂಸತ್ ಆವರಣದಿಂದ ಪರಾರಿಯಾಗಿ ರಾಜಸ್ಥಾನದ ನಾಗೌರ್ ಗೆ ತೆರಳಿದ್ದು, ಪೋಲಿಸರು ಶೀಘ್ರವೇ ಆತನನ್ನು ಅಲ್ಲಿಗೆ ಕರೆದೊಯ್ಯಲಿದ್ದಾರೆ. ತನ್ನ ಮತ್ತು ಇತರರ ಮೊಬೈಲ್ ಫೋನ್ ಗಳನ್ನು ನಾಶಗೊಳಿಸಿದ್ದೇನೆ ಎಂದು ಝಾ ಹೇಳಿಕೊಂಡಿರುವ ಸ್ಥಳಕ್ಕೂ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಎಲ್ಲ ಬಂಧಿತ ಆರೋಪಿಗಳು ಏಳು ದಿನಗಳ ಪೋಲಿಸ್ ಕಸ್ಟಡಿಯಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News