ಸರ್ವಾಧಿಕಾರಿ ಶಕ್ತಿಗಳಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ: ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಖರ್ಗೆ

Update: 2024-06-08 08:15 GMT

Photo: X/@INCIndia

ಹೊಸದಿಲ್ಲಿ: "ಭವ್ಯ ಇತಿಹಾಸದ ಹಳೆಯ ಪಕ್ಷದ ಮೇಲೆ ವಿಶ್ವಾಸ ಇರಿಸುವ ಮೂಲಕ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾರರು ಸರ್ವಾಧಿಕಾರಿ ಶಕ್ತಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನಾ ದಿನ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಖರ್ಗೆ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕನ ಆಯ್ಕೆಗಾಗಿ ಈ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ರಾಹುಲ್‍ ಗಾಂಧಿಯವರು ಈ ಪಾತ್ರವನ್ನು ನಿಭಾಯಿಸಬೇಕು ಎನ್ನುವುದು ಬಹಳಷ್ಟು ಹಿರಿಯ ಮುಖಂಡರ ಒತ್ತಾಸೆ. "ಭಾರತದ 140 ಕೋಟಿ ಮಂದಿಯ ಆಗ್ರಹವೇ ನಮ್ಮ ಆಶಯ. ರಾಹುಲ್‍ ಗಾಂಧಿಯವರು ವಿರೋಧ ಪಕ್ಷದ ನಾಯಕನ ಹುದ್ದೆಯನ್ನು ವಹಿಸಿಕೊಳ್ಳಬೇಕು" ಎಂದು ತೆಲಂಗಾಣ ಸಿಎಂ ರೇವಂತ ರೆಡ್ಡಿ ಹೇಳಿದರು.

ಆ ಬಳಿಕ ಕಾಂಗ್ರೆಸ್ ಸಂಸದೀಯ ಪಕ್ಷವು ಹೊಸದಾಗಿ ಆಯ್ಕೆಯಾದ ಸಂಸದರ ಜತೆಗೆ ಕೂಡಾ ಸಭೆ ನಡೆಸಿತು. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಸದ್ಯ ಸೋನಿಯಾಗಾಂಧಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಯಬರೇಲಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸದಿರಲು ಅವರು ನಿರ್ಧರಿಸಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಿಂದ ರಾಹುಲ್‍ಗಾಂಧಿ ಆಯ್ಕೆಯಾಗಿದ್ದಾರೆ.

ರವಿವಾರ ಸಂಜೆ 7.15ಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುವರು. ಈ ಮಧ್ಯೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೊಸದಿಲ್ಲಿಯಲ್ಲಿ ಅಮಿತ್ ಶಾ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News