ಸರಕಾರಿ ಉದ್ಯೋಗ ನೇಮಕಾತಿಗಳಲ್ಲಿ ಶೇ. 60 ಮೀಸಲಾತಿ | ಜಮ್ಮು-ಕಾಶ್ಮೀರದ ಯುವ ಜನತೆ ಅಸಮಾಧಾನ

Update: 2024-07-14 16:12 GMT

ಸಾಂದರ್ಭಿಕ ಚಿತ್ರ

 

ಶ್ರೀನಗರ : ಜಮ್ಮು ಹಾಗೂ ಕಾಶ್ಮೀರದಲ್ಲಿ ಸರಕಾರಿ ಉದ್ಯೋಗ ನೇಮಕಾತಿಗಳಲ್ಲಿ ಕೇವಲ ಶೇ. 40 ಹುದ್ದೆಗಳನ್ನು ಮಾತ್ರ ಅರ್ಹತೆ ಆಧಾರದಲ್ಲಿ ನೀಡುವ (ಶೇ. 60 ಮೀಸಲಾತಿ) ಕೇಂದ್ರ ಸರಕಾರದ ನಿರ್ಧಾರದ ಕುರಿತಂತೆ ಕೇಂದ್ರಾಡಳಿತ ಪ್ರದೇಶದಲ್ಲಿ ಯುವಜನತೆ ಆಕ್ರೋಶ ವ್ಯಕ್ತಪಡಿಸಿದೆ.

ಕಳೆದ ಮಾರ್ಚ್‌ನಲ್ಲಿ ಮೀಸಲಾತಿ ಅಧಿಸೂಚನೆ ಪ್ರಕಟಗೊಂಡ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಕಾಶ್ಮೀರ ಕಣಿವೆ ಹಾಗೂ ಜಮ್ಮುವಿನ ವಿವಿಧ ಭಾಗಗಳಲ್ಲಿ ಯುವ ಜನತೆ ಭಯೋತ್ಪಾದನೆ, ಪತ್ಯೇಕತಾವಾದವನ್ನು ಬೆಂಬಲಿಸುವ ತಮ್ಮ ಹಿಂದಿನ ನಿಲುವಿಗಿಂತ ಭಿನ್ನವಾಗಿ ರಾಜ್ಯ ಸರಕಾರದ ಉದ್ಯೋಗಗಳಿಗೆ ಅರ್ಹತೆ ಆಧಾರದಲ್ಲಿ ನೇಮಕಾತಿ ನಡೆಸುವಂತೆ ಬೀದಿಗಿಳಿದು ಆಗ್ರಹಿಸಿದ್ದಾರೆ.

ಅವಕಾಶಗಳಲ್ಲಿ ಸಮಾನತೆಯನ್ನು ಪ್ರತಿಪಾದಿಸುವ ಈ ಬದಲಾವಣೆಯು ಇಂದಿನ ಯುವಕರ ನೂತನ ಭಾವನೆಗಳನ್ನು ಪ್ರತಿಬಿಂಬಿಸಿದೆ.

ಪಿಡಿಪಿ ನಾಯಕ ವಹೀದ್ ಪಾರಾ ತನ್ನ ‘ಎಕ್ಸ್’ನ ಪೋಸ್ಟ್‌ನಲ್ಲಿ, ಹೊಸ ಮೀಸಲಾತಿ ನೀತಿ ಅಸಂಖ್ಯಾತ ಪ್ರತಿಭಾವಂತ ವಿದ್ಯಾರ್ಥಿಗಳ ಅರ್ಹತೆ ಹಾಗೂ ಆಕಾಂಕ್ಷೆಗಳನ್ನು ನಿರ್ಲಕ್ಷಿಸಿದೆ. ಎಲ್ಲಾ ಪಾಲುದಾರರಿಗೆ ಸಮಾನ ಅವಕಾಶ ನೀಡುವ ನಿಟ್ಟಿನಲ್ಲಿ ಈ ನೀತಿಯನ್ನು ಮರು ಪರಿಶೀಲಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಆದರೆ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಹಾಗೂ ಅವರ ಪಕ್ಷ ಈ ನಿಲುವಿನಿಂದ ಅಂತರ ಕಾಯ್ದುಕೊಂಡ 6 ಗಂಟೆಗಳ ಬಳಿಕ ವಹೀದ್ ಪಾರಾ ಅವರು ತನ್ನ ಪೋಸ್ಟ್ ಅನ್ನು ಅಳಿಸಿದ್ದಾರೆ.

ಯೂತ್ ಎಗೈನ್ಸ್‌ಟ್ ಕರಪ್ಶನ್‌ನ ನಾಯಕರಾದ ಸಾಹಿಲ್ ಪರ್ರೆ ಹಾಗೂ ವಿಂಕಲ್ ಶರ್ಮಾ ಕಣಿವೆಯ ಉದ್ಯೋಗ ಆಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳ ಕಳವಳವನ್ನು ಪರಿಹರಿಸಲು ಸ್ಥಳೀಯ ರಾಜಕಾರಣಿಗಳೊಂದಿಗೆ ಸಕ್ರಿಯವಾಗಿ ಮಾತುಕತೆಯಲ್ಲಿ ತೊಡಗಿದ್ದಾರೆ.

ಶರ್ಮಾ ಹಾಗೂ ಪರ್ರೆ ಅವರು ಲೋಕಸಭೆಗೆ ಶ್ರೀನಗರದಿಂದ ಆಯ್ಕೆಯಾಗಿರುವ ಸಂಸದ ಸೈಯದ್ ಅಗಾ ರುಲ್ಲಾಹ್ ಮೆಹಿದಿ ಅವರಂತಹ ರಾಜಕಾರಣಿಗಳೊಂದಿಗೆ ಈ ಕುರಿತ ಮಾತುಕತೆಯಲ್ಲಿ ತೊಡಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News