ಕಚ್ಚಾ ತೈಲಬೆಲೆಗಳು 70 ಡಾಲರ್ ಗಿಂತ ಕೆಳಗಿಳಿದಿದ್ದರೂ ಭಾರತದಲ್ಲಿ ಪೆಟ್ರೋಲ್,ಡೀಸೆಲ್ ಬೆಲೆಗಳು ಇಳಿಕೆಯಾಗುವ ಸಾಧ್ಯತೆಯಿಲ್ಲ: ವರದಿ
ಹೊಸದಿಲ್ಲಿ: ಡಿಸೆಂಬರ್ 2021ರ ಬಳಿಕ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಕಚ್ಚಾ ತೈಲಬೆಲೆಗಳು ಪ್ರತಿ ಬ್ಯಾರಲ್‌ಗೆ 70 ಡಾಲರ್ ಗಿಂತ ಕೆಳಗಿಳಿದಿದ್ದರೂ ಭಾರತದಲ್ಲಿ ಸದ್ಯೋಭವಿಷ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗುವ ಸಾಧ್ಯತೆಯಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ತೈಲ ಮಾರಾಟ ಕಂಪನಿ(ಒಎಂಸಿ)ಗಳು ದೇಶಿಯ ಇಂಧನ ಬೆಲೆಗಳ ಕುರಿತು ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ದೀರ್ಘಾವಧಿಯವರೆಗೆ ಕಚ್ಚಾ ತೈಲಗಳ ಬೆಲೆಯಿಳಿಕೆ ಪ್ರವೃತ್ತಿಯನ್ನು ಕಾದು ನೋಡಲು ಬಯಸುತ್ತವೆ ಎಂದು ಐಸಿಆರ್‌ಎದ ಉಪಾಧ್ಯಕ್ಷ ಹಾಗೂ ಸಹಮುಖ್ಯಸ್ಥ (ಕಾರ್ಪೊರೇಟ್ ರೇಟಿಂಗ್‌ಗಳು) ಪ್ರಶಾಂತ ವಸಿಷ್ಠ ಹೇಳಿದರು.
ಒಪೆಕ್ಸ್ ಪ್ಲಸ್ ತನ್ನ ಬೇಡಿಕೆ ಮುನ್ನಂದಾಜನ್ನು ಕೆಳಮುಖವಾಗಿ ಪರಿಷ್ಕರೊಸಿದ್ದು, ಬ್ರೆಂಟ್ ಕ್ರೂಡ್ ಫ್ಯೂಚರ್ ಬೆಲೆಗಳು ಮಂಗಳವಾರ ಪ್ರತಿ ಬ್ಯಾರಲ್‌ಗೆ 70 ಡಾಲರ್ ಗಿಂತ ಕಡಿಮೆಯಾಗಲು ಕಾರಣವಾಗಿತ್ತು. ಬುಧವಾರ ವಹಿವಾಟಿನ ಆರಂಭದಲ್ಲಿ ಬೆಲೆಗಳು ಚೇತರಿಸಿಕೊಂಡಿದ್ದರೂ ಬಳಿಕ 70 ಡಾಲರ್ ಗಿಂತ ಕೆಳಗೆ ಕುಸಿದಿದ್ದವು. ಭಾರತೀಯ ಕಾಲಮಾನ ರಾತ್ರಿ 7:56ಕ್ಕೆ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರಲ್‌ಗೆ 69.68 ಡಾಲರ್ ಮತ್ತು ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ಪ್ರತಿ ಬ್ಯಾರಲ್‌ಗೆ 66.37 ಡಾಲರ್ ಗಳಲ್ಲಿ ವಹಿವಾಟಾಗುತ್ತಿದ್ದವು.
ಭಾರತೀಯ ಒಎಮ್‌ಸಿಗಳು 2024 ಮಾರ್ಚ್‌ನಲ್ಲಿ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಎರಡು ರೂ.ಗಳಿಂದ ಪರಿಷ್ಕರಿಸಿದ್ದವು.
ಹರ್ಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳು ಸನ್ನಿಹಿತವಾಗಿದ್ದು, ಒಎಂಸಿಗಳು ಇಂಧನ ಬೆಲೆಗಳನ್ನು ಇಳಿಸಬಹುದು ಎಂಬ ಊಹಾಪೋಹಗಳಿವೆ. ಅಲ್ಲದೆ ಈ ಕಂಪನಿಗಳು ಇತ್ತೀಚಿನ ತ್ರೈಮಾಸಿಕಗಳಲ್ಲಿ ಗಣನೀಯ ಲಾಭವನ್ನು ಗಳಿಸಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲ ತೈಮಾಸಿಕದಲ್ಲಿ ಒಟ್ಟು 7,371 ಕೋಟಿ ರೂ.ಗಳ ನಿವ್ವಳ ಲಾಭವನ್ನು ದಾಖಲಿಸಿವೆ.