ಉದ್ಯೋಗಿಗಳಿಗೆ ಪಿಎಫ್ ದೀಪಾವಳಿ ಉಡುಗೊರೆ

Update: 2023-11-10 14:51 GMT

Photo- PTI

ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಒ)ಯು ಭವಿಷ್ಯನಿಧಿ ಖಾತೆಗಳಿಗೆ ಬಡ್ಡಿ ಜಮಾ ಮಾಡುವುದನ್ನು ಆರಂಭಿಸುವ ಮೂಲಕ ತನ್ನ ಚಂದಾದಾರರಿಗೆ ದೀಪಾವಳಿ ಉಡುಗೊರೆಯನ್ನು ನೀಡಿದೆ. ಭವಿಷ್ಯನಿಧಿ ಹೂಡಿಕೆಯ ಮೇಲೆ 2022-23ನೇ ವಿತ್ತವರ್ಷಕ್ಕಾಗಿ ಬಡ್ಡಿದರವು ಶೇ.8.15 ಆಗಿದೆ ಎಂದು ಇಪಿಎಫ್‌ಒ ತಿಳಿಸಿದೆ.

ಕೆಲವು ಭವಿಷ್ಯನಿಧಿ ಚಂದಾದಾರರು ಈಗಾಗಲೇ ತಮ್ಮ ಖಾತೆಗಳಲ್ಲಿ ಬಡ್ಡಿಯನ್ನು ಸ್ವೀಕರಿಸಿದ್ದಾರೆ, ಆದರೆ ಬಡ್ಡಿ ಮೊತ್ತವು ಎಲ್ಲ ಖಾತೆಗಳಲ್ಲಿ ಜಮಾಗೊಳ್ಳಲು ಸಮಯವನ್ನು ತೆಗೆದುಕೊಳ್ಳಬಹುದು ಎಂದು ಅದು ಹೇಳಿದೆ.

ಭವಿಷ್ಯನಿಧಿ ಹೂಡಿಕೆಯ ಮೇಲಿನ ಸಂಚಿತ ಬಡ್ಡಿಯನ್ನು ಸಂಪೂರ್ಣವಾಗಿ ಪಾವತಿಸಲಾಗುತ್ತದೆ. ಚಂದಾದಾರರಿಗೆ ಯಾವುದೇ ಬಡ್ಡಿಯು ನಷ್ಟವಾಗುವುದಿಲ್ಲ ಎಂದು ಇಪಿಎಫ್‌ಒ x ಪೋಸ್ಟ್‌ನಲ್ಲಿ ತಿಳಿಸಿದೆ.

ಈಗಾಗಲೇ 24 ಕೋಟಿಗೂ ಅಧಿಕ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.

ಬಡ್ಡಿಹಣವನ್ನು ಜಮೆ ಮಾಡಿದಾಗ ಅದು ಚಂದಾದಾರನ ಭವಿಷ್ಯನಿಧಿ ಖಾತೆಯಲ್ಲಿ ಕಾಣಿಸಿಕೊಳ್ಳುತ್ತದೆ. ಭವಿಷ್ಯನಿಧಿ ಖಾತೆಯಲ್ಲಿ ಮೊತ್ತವನ್ನು ಟೆಕ್ಸ್ಟ್ ಮೆಸೇಜ್,ಮಿಸ್ಸಡ್ ಕಾಲ್, ಉಮಂಗ್ ಆ್ಯಪ್ ಮತ್ತು ಇಪಿಎಫ್‌ಒ ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದಾಗಿದೆ.

ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಪ್ರತಿ ವರ್ಷ ವಿತ್ತ ಸಚಿವಾಲಯದೊಂದಿಗೆ ಸಮಾಲೋಚಿಸಿ ಬಡ್ಡಿದರವನ್ನು ನಿರ್ಧರಿಸುತ್ತದೆ. ಈ ವರ್ಷದ ಬಡ್ಡಿದರವನ್ನು ಇಪಿಎಫ್‌ಒ ಕಳೆದ ಜುಲೈನಲ್ಲಿ ಪ್ರಕಟಿಸಿತ್ತು.

2020-21ನೇ ಸಾಲಿಗೆ ಶೇ.8.5 ಬಡ್ಡಿಯನ್ನು ನೀಡಿದ್ದ ಇಪಿಎಫ್‌ಒ ಕಳೆದ ವರ್ಷ ಬಡ್ಡಿದರವನ್ನು ನಾಲ್ಕು ದಶಕಗಳ ಕನಿಷ್ಠವಾದ ಶೇ.8.10ಕ್ಕೆ ತಗ್ಗಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News