ಕಾರಾಗೃಹದಲ್ಲಿ ಜಾತಿ ತಾರತಮ್ಯ ಆರೋಪಿಸಿ ಪಿಐಎಲ್ ; ಕೇಂದ್ರ, 11 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

Update: 2024-01-03 17:02 GMT

ಸುಪ್ರೀಂ ಕೋರ್ಟ್ |Photo: PTI

ಹೊಸದಿಲ್ಲಿ: ಹನ್ನೊಂದು ರಾಜ್ಯಗಳ ಕಾರಾಗೃಹ ಕೈಪಿಡಿಗಳು ಜೈಲುಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಉತ್ತೇಜಿಸುತ್ತದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಕುರಿತಂತೆ ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರಕಾರ, 11 ರಾಜ್ಯಗಳ ಪ್ರತಿಕ್ರಿಯೆ ಕೋರಿದೆ.

ಉತ್ತರಪ್ರದೇಶ, ಪಶ್ಚಿಮಬಂಗಾಳ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಒಡಿಶಾ, ಜಾರ್ಖಂಡ್ ಕೇರಳ, ತಮಿಳುನಾಡು, ಮಹಾರಾಷ್ಟ್ರಗಳ ಕಾರಾಗೃಹ ಕೈಪಿಡಿಗಳು ತಮ್ಮ ಜೈಲುಗಳಲ್ಲಿ ಕೆಲಸದ ಹಂಚಿಕೆಯಲ್ಲಿ ತಾರತಮ್ಯ ಮಾಡಲು ಹಾಗೂ ಕೈದಿಗಳನ್ನು ಜಾತಿ ಆಧರಿಸಿ ಬ್ಯಾರಕ್ ಗಳಲ್ಲಿ ಇರಿಸಲು ಉತ್ತೇಜನ ನೀಡುತ್ತಿದೆ ಎಂದು ಹಿರಿಯ ನ್ಯಾಯವಾದಿ ಎಸ್. ಮುರಳೀಧರ್ ಅವರ ಪ್ರತಿಪಾದಿಸಿದರು.

ಇವರ ಪ್ರತಿಪಾದನೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿಪಾಲ, ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ ಗಮನಕ್ಕೆ ತೆಗೆದುಕೊಂಡಿತು.

ನಿರ್ದಿಷ್ಟ ಅಧಿಸೂಚಿತವಲ್ಲದ ಬುಡಕಟ್ಟುಗಳು ಹಾಗೂ ಮತ್ತೆ ಮತ್ತೆ ಅಪರಾಧ ಎಸಗುವವರನ್ನು ವಿಭಿನ್ನವಾಗಿ ಪರಿಗಣಿಸಲಾಗುತ್ತಿದೆ ಹಾಗೂ ತಾರಮತ್ಯ ಎಸಗಲಾಗುತ್ತಿದೆ ಎಂದು ಮುರಳೀಧರ್ ತಿಳಿಸಿದ್ದಾರೆ.

ರಾಜ್ಯಗಳಿಂದ ಕಾರಾಗೃಹ ಕೈಪಿಡಿಯನ್ನು ಸಂಗ್ರಹಿಸುವಂತೆ ನ್ಯಾಯಾಲಯ ಮುರಳೀಧರ್ ಅವರಿಗೆ ಸೂಚಿಸಿತು. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿತು.

ಕೇಂದ್ರ ಗೃಹ ಸಚಿವಾಲಯ ಹಾಗೂ ಇತರರಿಗೆ ನೋಟಿಸು ಜಾರಿ ಮಾಡಿದ ಪೀಠ, ಮಹಾರಾಷ್ಟ್ರದ ಕಲ್ಯಾಣದ ನಿವಾಸಿಯಾಗಿರುವ ಸುಕನ್ಯಾ ಶಾಂತಾ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಎತ್ತಿದ ವಿಷಯಗಳನ್ನು ನಿರ್ವಹಿಸುವಲ್ಲಿ ನ್ಯಾಯಾಲಯಕ್ಕೆ ನೆರವು ನೀಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News