ಪನ್ವೇಲ್ ನ ಫಾರ್ಮ್ ಹೌಸ್ ಬಳಿ ನಟ ಸಲ್ಮಾನ್ ಖಾನ್ ರನ್ನು ಕಾರಿನಲ್ಲೇ ಹತ್ಯೆಗೈಯ್ಯಲು ಯೋಜಿಸಿದ್ದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್: ವರದಿ

Update: 2024-06-01 07:48 GMT

ನಟ ಸಲ್ಮಾನ್ ಖಾನ್ (PTI)

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಮಹಾರಾಷ್ಟ್ರದ ಪನ್ವೇಲ್ ನಲ್ಲಿರುವ ಅವರ ಫಾರ್ಮ್ ಹೌಸ್ ಬಳಿ ಕಾರಿನಲ್ಲಿಯೇ ಎಕೆ-47 ರೈಫಲ್ ಗಳನ್ನು ಬಳಸಿ ಹತ್ಯೆಗೈಯ್ಯಲು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡವು ಯೋಜಿಸಿತ್ತು ಎಂದು ಮೂಲಗಳು ತಿಳಿಸಿವೆ ಎಂದು indiatoday.in ವರದಿ ಮಾಡಿದೆ.

ಈ ಸಂಬಂಧ ನಾಲ್ವರು ಶೂಟರ್ ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಅವರನ್ನು ಕ್ರಮವಾಗಿ ಧನಂಜಯ್ ತಾಪ್ಸಿಂಗ್ ಅಲಿಯಾಸ್ ಅಜಯ್ ಕಶ್ಯಪ್, ಗೌರವ ಭಾಟಿಯಾ ಅಲಿಯಾಸ್ ನಹ್ವಿ, ವಾಪ್ಸಿ ಖಾನ್ ಅಲಿಯಾಸ್ ವಾಸೀಂ ಚಿಕ್ನಾ ಹಾಗೂ ರಿಝ್ವಾನ್ ಖಾನ್ ಅಲಿಯಾಸ್ ಜಾವೇದ್ ಖಾನ್ ಎಂದು ಗುರುತಿಸಲಾಗಿದೆ.

ಈ ನಾಲ್ಕು ಮಂದಿ ಶೂಟರ್ ಗಳು ಪೂರ್ವಭಾವಿಯಾಗಿ ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ಹಾಗೂ ಗುಂಡು ಹಾರಿಸಲಿರುವ ಸ್ಥಳದ ಪರಿಶೀಲನೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ ಎಂದು India Today TV ವರದಿ ಮಾಡಿದೆ.

ಸಲ್ಮಾನ್ ಖಾನ್ ಮೇಲೆ ಎಕೆ-47 ರೈಫಲ್ ಗಳಲ್ಲದೆ ಇತರ ಶಸ್ತ್ರಾಸ್ತ್ರಗಳಿಂದಲೂ ದಾಳಿ ನಡೆಸುವಂತೆ ನಾಲ್ವರು ಶೂಟರ್ ಗಳಿಗೆ ಸೂಚನೆ ನೀಡಿರುವ ವಿಡಿಯೊಗಳನ್ನು ಅವರ ಮೊಬೈಲ್ ಫೋನ್ ಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ಬಂಧಿತ ಅಜಯ್ ಕಶ್ಯಪ್, ಉದ್ದೇಶಿತ ಅಪರಾಧ ಎಸಗಲು ಎಂ16, ಎಕೆ47 ಹಾಗೂ ಎಕೆ-92 ರೈಫಲ್ ಗಳನ್ನು ಖರೀದಿಸಲು ತಾನು ಪಾಕಿಸ್ತಾನದಲ್ಲಿರುವ ದೋಗಾ ಎಂಬ ಶಸ್ತ್ರಾಸ್ತ್ರ ವ್ಯಾಪಾರಿಯ ಸಂಪರ್ಕದಲ್ಲಿದ್ದೆ ಎಂದು ಬಹಿರಂಗಪಡಿಸಿದ್ದಾನೆ ಎಂದು ಹೇಳಲಾಗಿದೆ.

ಪನ್ವೇಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ‌ ಎಫ್‌ಐಆರ್ ಪ್ರಕಾರ, “ಒಮ್ಮೆ ಶಸ್ತ್ರಾಸ್ತ್ರಗಳನ್ನು ಸ್ವೀಕರಿಸಿದ ಕೂಡಲೇ ಸಲ್ಮಾನ್ ಖಾನ್ ಗೆ ಒಂದು ಪಾಠ ಕಲಿಸಲಾಗುವುದು. ಈ ಕೃತ್ಯಕ್ಕಾಗಿ ಗ್ಯಾಂಗ್ ಸ್ಟರ್ ಗೋಲ್ಡೀ ಬ್ರಾರ್ ಮೂಲಕ ಕೆನಡಾದಿಂದ ಹಣ ಸ್ವೀಕರಿಸಲಿದ್ದೇನೆ” ಎಂದು ಅಜಯ್ ಕಶ್ಯಪ್ ತನ್ನ ಪಾಲುದಾರನಿಗೆ ಹೇಳುತ್ತಿರುವುದು ಪೊಲೀಸರು ವಶಪಡಿಸಿಕೊಂಡಿರುವ ವಿಡಿಯೊದಲ್ಲಿ ಕಂಡು ಬಂದಿದೆ.

ಒಂದು ವೇಳೆ ನಟ ಸಲ್ಮಾನ್ ಖಾನ್ ರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾದರೆ, ಗ್ಯಾಂಗ್ ಸ್ಟರ್ ಗಳಾದ ಲಾರೆನ್ಸ್ ಬಿಷ್ಣೋಯಿ ಹಾಗೂ ಗೋಲ್ಡೀ ಬ್ರಾರ್ ದೊಡ್ಡ ಮೊತ್ತದ ಹಣ ನೀಡುವುದಾಗಿ ಭರವಸೆ ನೀಡಿದ್ದರು ಎಂಬ ಸಂಗತಿ ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.

ಎಪ್ರಿಲ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸದ ಮೇಲೆ ಇಬ್ಬರು ಬೈಕ್ ಸವಾರರು ಗುಂಡಿನ ದಾಳಿ ನಡೆಸಿ ಪರಾರಿಯಾದ ನಂತರ, ಈ ಸಂಗತಿ ಹೊರ ಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News