ಅಂಕೋಲಾ ಭೂಕುಸಿತದಲ್ಲಿ ಸಿಲುಕಿಕೊಂಡಿರುವ ಕೇರಳ ನಿವಾಸಿ ಅರ್ಜುನ್‌ರನ್ನು ರಕ್ಷಿಸಲು ಸೇನೆ ನಿಯೋಜಿಸಲು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ
ಹೊಸದಿಲ್ಲಿ: ಭಾರಿ ಮಳೆಯಿಂದಾಗಿ ಜುಲೈ 16ರಂದು ಕರ್ನಾಟಕದ ಉತ್ತರ ಕನ್ನಡದಲ್ಲಿ ಸಂಭವಿಸಿರುವ ಭೂಕುಸಿತದ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಸೇನೆಯನ್ನು ನಿಯೋಜಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಕೀಲ ಸುಭಾಷ್ ಚಂದ್ರನ್ ಕೆ.ಆರ್. ಎಂಬವರು ದಾಖಲಿಸಿದ್ದಾರೆ.
ಈ ಅರ್ಜಿಯಲ್ಲಿ, ಜುಲೈ 16ರಂದು ಕರ್ನಾಟಕದ ಉತ್ತರ ಕನ್ನಡದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಎಂಬವರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಇಂತಹ ವಿಕೋಪದ ಸಂದರ್ಭದಲ್ಲೂ ಕರ್ನಾಟಕದ ಪ್ರಾಧಿಕಾರಗಳು ಸೀಮಿತ ಮಾನವ ಸಂಪನ್ಮೂಲ ಹಾಗೂ ಯಂತ್ರಗಳನ್ನು ಮಾತ್ರ ಬಳಸುತ್ತಿವೆ ಎಂದು ಆರೋಪಿಸಲಾಗಿದೆ.
ಬೆಳಗಾವಿಯ ಬಳಿ ಸೇನೆಯ ದಂಡು ಪ್ರದೇಶ ಹಾಗೂ ಕಾರವಾರದಲ್ಲಿ ನೌಕಾನೆಲೆ ಇರುವುದರಿಂದ, ರಕ್ಷಣಾ ಕಾರ್ಯಾಚರಣೆಗೆ ಸೇನೆಯನ್ನು ನಿಯೋಜಿಸಬಹುದಿತ್ತು. ಆದರೆ, ಅಂತಹ ಯಾವುದೇ ಪ್ರಯತ್ನಗಳನ್ನು ಮಾಡಲಾಗಿಲ್ಲ. ಶೋಧ ಕಾರ್ಯಾಚರಣೆಗಳು ಮುಂದುವರಿದಿದ್ದರೂ, ಕರ್ನಾಟಕ ಸರಕಾರ ಹಾಗೂ ಪೊಲೀಸ್ ಪ್ರಾಧಿಕಾರಗಳು ಆರಂಭದಲ್ಲಿ ಪ್ರದರ್ಶಿಸಿದ ನಿಷ್ಕ್ರಿಯತೆಯಿಂದಾಗಿ ಯಾವುದೇ ಸಕಾರಾತ್ಮಕ ಫಲಿತಾಂಶ ದೊರೆತಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.