ಪ್ರಧಾನಿ ಮೋದಿ ಮಣಿಪುರ ಭೇಟಿಯನ್ನು ಉದ್ದೇಶಪೂರ್ವಕ ತಪ್ಪಿಸುತ್ತಿದ್ದಾರೆ : ಕಾಂಗ್ರೆಸ್ ಆರೋಪ

Update: 2024-09-14 16:40 GMT

ನರೇಂದ್ರ ಮೋದಿ, ಜೈರಾಂ ರಮೇಶ್‌ | PTI 

ಹೊಸದಿಲ್ಲಿ : ಮಣಿಪುರದಲ್ಲಿಯ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಶನಿವಾರ ಎಕ್ಸ್ ಪೋಸ್ಟ್‌ ನಲ್ಲಿ ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಅವರು,‘ನಮ್ಮ ಅಜೈವಿಕ ಪ್ರಧಾನಿ ದೇಶದ ಇತರ ಭಾಗಗಳಿಗೆ ಮತ್ತು ವಿದೇಶಗಳಿಗೆ ಪ್ರಯಾಣಿಸುವುದನ್ನು ಮುಂದುವರಿಸಿದ್ದಾರೆ, ಆದರೆ ಸಂಕಷ್ಟದಲ್ಲಿರುವ ಮಣಿಪುರಕ್ಕೆ ಭೇಟಿಯನ್ನು ಉದ್ದೇಶಪೂರ್ವಕ ತಪ್ಪಿಸುತ್ತಿದ್ದಾರೆ ’ಎಂದು ಹೇಳಿದ್ದಾರೆ.

‘2023, ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಸಂಘರ್ಷಗಳು ಭುಗಿಲೆದ್ದಿದ್ದವು. ಹಿಂಸಾಚಾರದ ಕುರಿತು ತನಿಖೆಗಾಗಿ ವಿಚಾರಣಾ ಆಯೋಗವನ್ನು ರಚಿಸಿದ್ದ ಕೇಂದ್ರವು, ವರದಿಯನ್ನು ಸಲ್ಲಿಸಲು ಅದಕ್ಕೆ ಆರು ತಿಂಗಳುಗಳ ಗಡುವು ನೀಡಿತ್ತು. ವರದಿಯನ್ನು ಈವರೆಗೂ ಸಲ್ಲಿಸಲಾಗಿಲ್ಲ. ಈಗ ಆಯೋಗಕ್ಕೆ 2024, ನ.24ರವರೆಗೆ ಗಡುವನ್ನು ವಿಸ್ತರಿಸಲಾಗಿದೆ. ಈ ನಡುವೆ ಮಣಿಪುರದಲ್ಲಿ ಜನರ ಸಂಕಷ್ಟಗಳು ಮುಂದುವರಿದಿವೆ. ಆದರೆ ಅಲ್ಲಿಗೆ ಭೇಟಿ ನೀಡಲು ಪ್ರಧಾನಿಯವರಿಗೆ ಪುರುಸೋತ್ತಿಲ್ಲ’ ಎಂದು ಜೈರಾಂ ಕುಟುಕಿದ್ದಾರೆ.

ಗುವಾಹಟಿ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯನ್ಯಾಯಾಧೀಶ ಅಜಯ ಲಾಂಬಾ ಅವರು ಆಯೋಗದ ಮುಖ್ಯಸ್ಥರಾಗಿದ್ದು, ಮಾಜಿ ಐಎಎಸ್ ಅಧಿಕಾರಿ ಹಿಮಾಂಶು ಶೇಖರ್ ದಾಸ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಅಲೋಕ್ ಪ್ರಭಾಕರ್ ಅವರು ಸದಸ್ಯರಾಗಿದ್ದಾರೆ.

ಸರಕಾರವು ಶುಕ್ರವಾರ ಆಯೋಗಕ್ಕೆ ಗಡುವನ್ನು ವಿಸ್ತರಿಸಿ ಆದೇಶವನ್ನು ಹೊರಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News