ನಾನು ಮುಗ್ಧ, ಎಂದಿಗೂ ಹಿಂದೂ-ಮುಸ್ಲಿಂ ಭೇದ ಮಾಡಿಲ್ಲ : ಪ್ರಧಾನಿ ಮೋದಿ
ಹೊಸದಿಲ್ಲಿ : ಮಂಗಳವಾರ News18 ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಾವು ಇತ್ತೀಚೆಗೆ ಮುಸ್ಲಿಮರ ಕುರಿತು ನೀಡಿದ್ದ ಹೇಳಿಕೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮುಗ್ಧತೆ ಪ್ರದರ್ಶಿಸಿದ್ದಾರೆ.
ಮೂರು ವಾರಗಳ ಹಿಂದೆ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಭಾರತದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಾಗುತ್ತದೆ ಎಂಬರ್ಥದ ಹೇಳಿಕೆ ನೀಡಿದ್ದರಿಂದ ವಿವಾದ ಭುಗಿಲೆದ್ದಿತ್ತು. ಅವರ ಈ ಹೇಳಿಕೆಯ ಕುರಿತು ವಿಡಿಯೊ ಸಾಕ್ಷ್ಯವಿದ್ದರೂ, ತಾನೆಂದೂ ನಿರ್ದಿಷ್ಟವಾಗಿ ಮುಸ್ಲಿಮರನ್ನು ಉಲ್ಲೇಖಿಸಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ಪ್ರಧಾನಿ ಮೋದಿ ಅಲ್ಲಗಳೆದಿದ್ದಾರೆ.
ಎಪ್ರಿಲ್ 21ರಂದು ರಾಜಸ್ಥಾನದ ಬನ್ಸ್ವಾರದಲ್ಲಿ ನಡೆದಿದ್ದ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದ ಮೋದಿ, “ಇದಕ್ಕೂ ಮುನ್ನ, ಕಾಂಗ್ರೆಸ್ಸಿಗರು ಅಧಿಕಾರದಲ್ಲಿದ್ದಾಗ, ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಅಧಿಕಾರವಿದೆ ಎಂದು ಹೇಳಿದ್ದರು. ಇದರರ್ಥ ಅವರು ಈ ಸಂಪತ್ತನ್ನು ಹೆಚ್ಚು ಮಕ್ಕಳಿರುವವರಿಗೆ, ನುಸುಳುಕೋರರಿಗೆ ಹಂಚುತ್ತಾರೆ ಎಂದು. ನೀವು ಶ್ರಮಪಟ್ಟು ದುಡಿದಿರುವ ದುಡ್ಡನ್ನು ನುಸುಳುಕೋರರಿಗೆ ನೀಡಬೇಕೆ?” ಎಂದು 2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಡಾ. ಮನಮನೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದರು. ಈ ಭಾಷಣದ ವಿಡಿಯೊವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದರು.
ಆದರೆ, ರೂಬಿಕಾ ಲಿಯಾಕತ್ ರೊಂದಿಗಿನ ಸಂದರ್ಶನದಲ್ಲಿ, ನುಸುಳುಕೋರರು ಹಾಗೂ ಹೆಚ್ಚು ಮಕ್ಕಳನ್ನು ಹೊಂದಿರುವ ಕುರಿತ ತಮ್ಮ ಹೇಳಿಕೆಯ ಬಗ್ಗೆ ಪ್ರಶ್ನಿಸಿದಾಗ ಪ್ರಧಾನಿ ಮೋದಿ ರಕ್ಷಣಾತ್ಮಕ ನಿಲುವಿನ ಮೊರೆ ಹೋದರು. “ನನಗೆ ಆಘಾತವಾಗಿದೆ! ನನ್ನ, ಹಲವಾರು ಮಕ್ಕಳನ್ನು ಹೊಂದಿರುವವರ ಕುರಿತ ಹೇಳಿಕೆಯು ಮುಸ್ಲಿಮರ ಕುರಿತದ್ದು ಎಂದು ಯಾರು ಹೇಳಿದ್ದು? ನೀವೇಕೆ ಮುಸ್ಲಿಮರಿಗೆ ಅನ್ಯಾಯವೆಸಗುತ್ತಿದ್ದೀರಿ?” ಎಂದು ಪ್ರಶ್ನಿಸಿದ ಮೋದಿ, “ನಮ್ಮ ಕಡೆ ಬಡ ಕುಟುಂಬಗಳೂ ಕೂಡಾ ಅದೇ ಸ್ಥಿತಿಯಲ್ಲಿವೆ. ಅವರು ಯಾವುದೇ ಸಮುದಾಯದಿಂದ ಬಂದಿರಲಿ, ಅವರು ತಮ್ಮ ಮಕ್ಕಳನ್ನು ಶಿಕ್ಷಿತರನ್ನಾಗಿಸಲು ಸಾಧ್ಯವಾಗಿಲ್ಲ. ಎಲ್ಲಿ ಬಡತನವಿರುತ್ತದೊ, ಅಲ್ಲಿ ಹೆಚ್ಚು ಮಕ್ಕಳಿರುತ್ತಾರೆ” ಎಂದು ತಮ್ಮ ಹೇಳಿಕೆಯನ್ನು ವಿಸ್ತರಿಸಿದರು.
ನಿಮ್ಮ ಹೇಳಿಕೆಯು ಮುಸ್ಲಿಮರನ್ನೇ ಗುರಿಯಾಗಿಸಿಕೊಂಡಿತ್ತೇ ಒಂದು ಮತ್ತೊಮ್ಮೆ ಒತ್ತಿ ಪ್ರಶ್ನಿಸಿದಾಗ, “ನಾನು ಹಿಂದೂ ಅಥವಾ ಮುಸ್ಲಿಂ ಎಂದು ಹೇಳಲಿಲ್ಲ. ನೀವು ಆರೈಕೆ ಮಾಡಲು ಸಾಧ್ಯವಿರುವಷ್ಟು ಮಕ್ಕಳನ್ನು ಮಾತ್ರ ಹೊಂದಬೇಕು ಎಂದು ನಾನು ಹೇಳಿದ್ದೆ. ಸರಕಾರವು ಅವರನ್ನು ಆರೈಕೆ ಮಾಡಬೇಕಾದ ಹಂತಕ್ಕೆ ತರಬೇಡಿ ಎಂದು ಹೇಳಿದ್ದೆ” ಎಂದು ಸಮರ್ಥಿಸಿಕೊಂಡಿದ್ದಾರೆ. “ನಾನು ಹಿಂದೂ-ಮುಸ್ಲಿಂ ಭೇದ ಮಾಡಿದ ದಿನ, ನಾನು ಸಾರ್ವಜನಿಕ ಜೀವನದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ನಾನು ಹಿಂದೂ-ಮುಸ್ಲಿಂ ಭೇದ ಮಾಡುವುದಿಲ್ಲ. ಇದು ನನ್ನ ಬದ್ಧತೆ” ಎಂದು ಅವರು ತಮ್ಮ ಮಾತುಗಳನ್ನು ಮುಂದುವರಿಸಿದರು.
ಈ ನಿರಾಕರಣೆಯು ಮೋದಿಯವರ ಚುನಾವಣಾ ಸಮಾವೇಶ ಭಾಷಣದ ದಾಖಲಿತ ಸಾಕ್ಷ್ಯಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಅವರು ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ಮುಸ್ಲಿಮರನ್ನು ಉಲ್ಲೇಖಿಸಿದ್ದರಲ್ಲದೆ, ಅವರೊಂದಿಗೆ ಸಂಪನ್ಮೂಲ ಹಂಚಿಕೆ ಹಾಗೂ ರಾಷ್ಟ್ರೀಯ ಭದ್ರತೆಯಂತಹ ವಿಷಯಗಳನ್ನು ತಳುಕು ಹಾಕಿದ್ದರು.