ಮೋದಿ ‘ರಾಮಮಂದಿರ-ಬುಲ್ಡೋಜರ್’ ಹೇಳಿಕೆಯಿಂದ ಮತದಾರರನ್ನು ಪ್ರಚೋದಿಸುತ್ತಿದ್ದಾರೆ: ಖರ್ಗೆ ಆರೋಪ

Update: 2024-05-18 11:42 GMT

ಮಲ್ಲಿಕಾರ್ಜುನ ಖರ್ಗೆ | PC : X \ @kharge

ಮುಂಬೈ: ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದರೆ ರಾಮ ಮಂದಿರದ ಮೇಲೆ ಬುಲ್ಡೋಜರ್ ಹರಿಸಲಿದೆ ಎಂದು ಪದೇ ಪದೇ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತದಾರರನ್ನು ಪ್ರಚೋದಿಸುತ್ತಿದ್ದಾರೆ ಎಂದು ಶನಿವಾರ ಇಲ್ಲಿ ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

ಎನ್‌ಸಿಪಿ(ಎಸ್‌ಪಿ) ವರಿಷ್ಠ ಶರದ್ ಪವಾರ್ ಮತ್ತು ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ,‌ ‘ನಾವು ಈವರೆಗೆ ಬುಲ್ಡೋಜರ್ ಬಳಸಿಲ್ಲ. ಪ್ರಚೋದನಾಕಾರಿ ಭಾಷಣಗಳನ್ನು ಮಾಡುವವರ ವಿರುದ್ಧ ಚುನಾವಣಾ ಆಯೋಗವು ಕ್ರಮವನ್ನು ತೆಗೆದುಕೊಳ್ಳಬೇಕು. ಪ್ರಧಾನಿಯವರೇ ಇಂತಹ ಭಾಷಣಗಳನ್ನು ಮಾಡುತ್ತಿದ್ದಾರೆ,ಅವರು ಜನರನ್ನು ಪ್ರಚೋದಿಸುತ್ತಿದ್ದಾರೆ. ನಮ್ಮ ಸರಕಾರವು ಬಂದ ಬಳಿಕ ಪ್ರತಿಯೊಂದನ್ನೂ ನಮ್ಮ ಸಂವಿಧಾನಕ್ಕೆ ಅನುಗುಣವಾಗಿ ರಕ್ಷಿಸಲಾಗುವುದು,ನಾವು ಸಂವಿಧಾನವನ್ನು ಅನುಸರಿಸುತ್ತೇವೆ ’ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿಯ ‘ನೈಜ ಪಕ್ಷಗಳ’ ಬದಲು ಬಿಜೆಪಿಯನ್ನು ಬೆಂಬಲಿಸುವ ಬಣಗಳಿಗೆ ಪಕ್ಷದ ಚಿಹ್ನೆಗಳನ್ನು ನೀಡುವ ಚುನಾವಣಾ ಆಯೋಗದ ನಿರ್ಧಾರಕ್ಕೆ ವಿಷಾದವನ್ನು ವ್ಯಕ್ತಪಡಿಸಿದರು.

ಮಹಾರಾಷ್ಟ್ರದ ಅಕ್ರಮ ‘ಮಹಾಯುತಿ’ ಸರಕಾರವು ದ್ರೋಹ ಮತ್ತು ಷಡ್ಯಂತ್ರದ ಆಧಾರದಲ್ಲಿ ರಚನೆಯಾಗಿದೆ. ಖುದ್ದು ಪ್ರಧಾನಿಗಳೇ ಅದನ್ನು ಬೆಂಬಲಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ರ್ಯಾಲಿಗಳನ್ನು ನಡೆಸುತ್ತಿರುವ ಅವರು ಹೋದಲ್ಲೆಲ್ಲ ಜನರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಖರ್ಗೆ, ಪಕ್ಷದ ಚಿಹ್ನೆಯನ್ನು ನಿಜವಾದ ಪಕ್ಷಗಳಿಂದ ಕಿತ್ತುಕೊಂಡು ಬಿಜೆಪಿಯನ್ನು ಬೆಂಬಲಿಸುವ ಪಕ್ಷಗಳಿಗೆ ನೀಡಲಾಗುತ್ತಿದೆ. ಇದು ನ್ಯಾಯಾಲಯ, ಚುನಾವಣಾ ಆಯೋಗದ ನಿರ್ಧಾರ, ಆದರೆ ಎಲ್ಲವೂ ಮೋದಿಯವರ ಸೂಚನೆಗಳ ಮೇರೆಗೇ ನಡೆಯುತ್ತದೆ ಎಂದು ಪ್ರತಿಪಾದಿಸಿದರು.

ಮಹಾರಾಷ್ಟ್ರದಲ್ಲಿ ಇಂಡಿಯಾ ಮೈತ್ರಿಕೂಟದ ಉತ್ತಮ ಸಾಧನೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು ಭರ್ಜರಿ ಗೆಲುವಿನ ಮುನ್ಸೂಚನೆಯನ್ನು ನೀಡಿದರು. ರಾಜ್ಯದಲ್ಲಿಯ 48 ಸ್ಥಾನಗಳ ಪೈಕಿ 46ನ್ನು ಇಂಡಿಯಾ ಮೈತ್ರಿಕೂಟವು ಗೆಲ್ಲಲಿದೆ. ಇದನ್ನು ಜನರೇ ಹೇಳುತ್ತಿದ್ದಾರೆ. ನಮ್ಮ ಮೈತ್ರಿಕೂಟವು ಗರಿಷ್ಠ ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಬಿಜೆಪಿಯನ್ನು ಸೋಲಿಸಲಿದೆ ಎಂದರು.

ಆಪ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಕುರಿತು ಪ್ರಶ್ನೆಗೆ ಖರ್ಗೆ,ಉಭಯ ಪಕ್ಷಗಳು ದಿಲ್ಲಿಯಲ್ಲಿ ಬಿಜೆಪಿ ವಿರುದ್ಧ ಒಂದಾಗಿ ಹೋರಾಡುತ್ತಿವೆ ಮತ್ತು ಪಂಜಾಬಿನಲ್ಲಿ ಪರಸ್ಪರರ ವಿರುದ್ಧ ಕಣದಲ್ಲಿವೆ ಎಂದು ಉತ್ತರಿಸಿದರು. ಇದು ಪ್ರಜಾಪ್ರಭುತ್ವ,ಸರ್ವಾಧಿಕಾರವಲ್ಲ. ಬಿಜೆಪಿಯನ್ನು ಸೋಲಿಸಲು ಏನನ್ನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News