ಜಿಲ್ಲೆಗಳ ರಾಜಧಾನಿಗಳ ಹೆಸರು ಹೇಳುವಂತೆ ಸವಾಲು ಹಾಕಿ ಅಪಹಾಸ್ಯಕ್ಕೀಡಾದ ಪ್ರಧಾನಿ ಮೋದಿ

Update: 2024-05-11 18:18 GMT

ಪ್ರಧಾನಿ ನರೇಂದ್ರ  | PC : ANI

ಹೊಸದಿಲ್ಲಿ: ಒಡಿಶಾದ ಎಲ್ಲಾ ಜಿಲ್ಲೆಗಳು ಮತ್ತು ಅವುಗಳ ʼರಾಜಧಾನಿʼಗಳ ಹೆಸರನ್ನು ಪೇಪರ್‌ನಲ್ಲಿ ನೋಡದೆ ಹೆಸರಿಸುವಂತೆ ಒಡಿಶಾ ಸಿಎಂ, ಬಿಜು ಜನತಾ ದಳ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸವಾಲು ಹಾಕಿದ್ದಾರೆ. ನವೀನ್‌ ಪಟ್ನಾಯಕ್‌ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಪಟ್ನಾಯಕ್‌ ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಅರಿವಿಲ್ಲ ಎಂದು ಅವರು ಹೇಳಿದ್ದಾರೆ.

"ಒಡಿಶಾದ ಜಿಲ್ಲೆಗಳು ಮತ್ತು ಆಯಾ ರಾಜಧಾನಿಗಳನ್ನು ಪೇಪರ್‌ನಲ್ಲಿ ನೋಡದೆ ಹೇಳಲು 'ನವೀನ್ ಬಾಬು' ಅವರಿಗೆ ಹೇಳಿ. ಸಿಎಂಗೆ ರಾಜ್ಯದ ಜಿಲ್ಲೆಗಳ ಹೆಸರಿಸಲು ಸಾಧ್ಯವಾಗದಿದ್ದರೆ, ನಿಮ್ಮ ನೋವು ಅವರಿಗೆ ತಿಳಿಯುತ್ತದೆಯೇ?" ಎಂದು ಒಡಿಶಾದ ಕಂಧಮಾಲ್‌ನಲ್ಲಿ ಪ್ರಧಾನಿ ಮೋದಿ ಅವರು ಹೇಳಿದರು.

"ಜನರ ಸಮಸ್ಯೆಗಳ ಬಗ್ಗೆ ಅರಿವಿಲ್ಲದ ಕಾರಣ ಜನರು ನವೀನ್ ಪಟ್ನಾಯಕ್ ಅವರ ಮೇಲೆ ಕೋಪಗೊಂಡಿದ್ದಾರೆ" ಎಂದು ಹೇಳುವ ಮೂಲಕ ಪಟ್ನಾಯಕ್ ಅವರು ಜನರ ಸಮಸ್ಯೆಗಳ ಬಗ್ಗೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಆದರೆ, ಜಿಲ್ಲೆಗಳ ರಾಜಧಾನಿಗಳ ಹೆಸರನ್ನು ಹೇಳುವಂತೆ ಪ್ರಧಾನಿ ಮೋದಿ ಹಾಕಿರುವ ಸವಾಲು ವ್ಯಾಪಕ ವ್ಯಂಗ್ಯಕ್ಕೆ ಗುರಿಯಾಗಿದ್ದು, ಜಿಲ್ಲೆಗೆ ಯಾವಾಗಿನಿಂದ ರಾಜಧಾನಿಯನ್ನು ಗುರುತಿಸಲಾಯಿತು ಎಂದು ಜನರು ಪ್ರಶ್ನಿಸಿದ್ದಾರೆ.

“ಇದು ನರೇಂದ್ರ ಮೋದಿ. ಭಾರತದ ಪ್ರಧಾನಿ. ಒಡಿಶಾದ ಎಲ್ಲ ಜಿಲ್ಲೆಗಳ ರಾಜಧಾನಿಯನ್ನು ಹೇಳುವಂತೆ ಅಲ್ಲಿನ ಸಿಎಂಗೆ ಇವರು ಸವಾಲು ಹಾಕಿದ್ದಾರೆ. ನಮಗೆ ದೇಶ ಮತ್ತು ರಾಜ್ಯಗಳಿಗೆ ರಾಜಧಾನಿ ಇದೆ. ಆದರೆ ಜಿಲ್ಲೆಗಳಿಗೆ ರಾಜಧಾನಿ ಇಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಿಗೆ ಮೂಲಭೂತ ಸಂಗತಿಗಳೇ ತಿಳಿದಿಲ್ಲ ಎಂಬುದು ನಾಚಿಕೆಗೇಡು. ಹಾಗಾಗಿಯೇ ನಮಗೆ ಅನಕ್ಷರಸ್ಥ ಪ್ರಧಾನಿಯ ಅಗತ್ಯವಿಲ್ಲ. ಇದು ಭಾರತದ ಎಲ್ಲ ನಾಗರಿಕರಿಗೆ ಮುಜುಗರದ ಸಂಗತಿ” ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದಾರೆ.

ಒಡಿಶಾ ರಾಜ್ಯದಲ್ಲಿ ಮೇ 13 ರಿಂದ ಜೂನ್ 1 ರವರೆಗೆ ನಾಲ್ಕು ಹಂತಗಳಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.

2019 ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜು ಜನತಾ ದಳ (ಬಿಜೆಡಿ) 146 ಸ್ಥಾನಗಳಲ್ಲಿ 112 ಸ್ಥಾನಗಳನ್ನು ಗೆದ್ದುಕೊಂಡಿತು, ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) 23 ಮತ್ತು ಕಾಂಗ್ರೆಸ್ 9 ಸ್ಥಾನಗಳನ್ನು ಗಳಿಸಿತು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News