ಪ್ರಧಾನಿ ಮೋದಿ ರಾಜ್ಯಗಳಿಗೆ ನೀಡುವ ಹಣದಲ್ಲಿ ಭಾರೀ ಕಡಿತಕ್ಕೆ ರಹಸ್ಯವಾಗಿ ಪ್ರಯತ್ನಿಸಿದ್ದರು ಎಂದ ತನಿಖಾ ವರದಿ

Update: 2024-01-18 11:19 GMT

ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾದ ತಕ್ಷಣ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದ್ದ ಹಣಕಾಸುಗಳಲ್ಲಿ ಭಾರೀ ಕಡಿತವನ್ನು ಮಾಡಲು ಹಣಕಾಸು ಆಯೋಗದೊಂದಿಗೆ ತೆರೆಮರೆಯ ಮಾತುಕತೆಗಳನ್ನು ನಡೆಸಿದ್ದರು. ಆದರೆ ಕೇಂದ್ರ ತೆರಿಗೆಗಳಲ್ಲಿ ರಾಜ್ಯಗಳ ಪಾಲುಗಳನ್ನು ನಿರ್ಧರಿಸುವ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿರುವ ಆಯೋಗದ ಮುಖ್ಯಸ್ಥರು ಪ್ರಧಾನಿಯವರ ಈ ಪ್ರಸ್ತಾವವನ್ನು ವಿರೋಧಿಸಿದ್ದರು ಮತ್ತು ಮೋದಿಯವರು ತನ್ನ ಪ್ರಯತ್ನದಿಂದ ಹಿಂದೆ ಸರಿಯುವಂತಾಗಿತ್ತು ಎಂದು ಇತ್ತೀಚಿಗೆ ಬಹಿರಂಗಗೊಂಡ ಮಾಹಿತಿಗಳು ತೋರಿಸಿವೆ ಎಂದು aljazeera.com ನಲ್ಲಿ ಶ್ರೀಗಿರೀಶ್ ಜಾಲಿಹಾಳ್ ಹಾಗು ನಿತಿನ್ ಸೇಥಿ ಅವರು ವರದಿ ಮಾಡಿದ್ದಾರೆ.

ಹಣಕಾಸು ಆಯೋಗದ ದೃಢವಾದ ನಿಲುವು ಮೋದಿ ಸರಕಾರವು ತನ್ನ ಚೊಚ್ಚಲ ಪೂರ್ಣ ಬಜೆಟ್‌ನ್ನು 48 ಗಂಟೆಗಳಲ್ಲಿ ಪುನರ್‌ಪರಿಶೀಲಿಸುವುದನ್ನು ಅನಿವಾರ್ಯವಾಗಿಸಿತ್ತು ಮತ್ತು ಕೇಂದ್ರ ತೆರಿಗೆಗಳಲ್ಲಿ ಹೆಚ್ಚಿನ ಭಾಗವನ್ನು ಉಳಿಸಿಕೊಳ್ಳುವ ತನ್ನ ಹುನ್ನಾರ ಕೈಕೊಟ್ಟಿದ್ದರಿಂದ ಕಲ್ಯಾಣ ಕಾರ್ಯಕ್ರಮಗಳಾದ್ಯಂತ ಹಣಕಾಸನ್ನು ಕಡಿತಗೊಳಿಸಿತ್ತು.

ಅದೇ ಸಮಯದಲ್ಲಿ ಮೋದಿಯವರು ರಾಜ್ಯಗಳಿಗೆ ಹಂಚಿಕೆ ಮಾಡಬೇಕಾದ ತೆರಿಗೆ ಪಾಲುಗಳ ಕುರಿತು ಹಣಕಾಸು ಆಯೋಗದ ಶಿಫಾರಸುಗಳನ್ನು ತಾನು ಸ್ವಾಗತಿಸುವುದಾಗಿ ಸಂಸತ್ತಿನಲ್ಲಿ ಸುಳ್ಳು ಹೇಳಿದ್ದರು ಎಂದು aljazeera.com ವರದಿ ಮಾಡಿದೆ.

ಕೇಂದ್ರ ಸರಕಾರದ ಚಿಂತನ ಚಾವಡಿ ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿವಿಆರ್ ಸುಬ್ರಹ್ಮಣ್ಯಂ ಅವರು ಈ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದಾರೆ. ಆ ಸಂದರ್ಭದಲ್ಲಿ ಪ್ರಧಾನಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದ ಅವರು ಮೋದಿ ಮತ್ತು ಹಣಕಾಸು ಆಯೋಗದ ಅಧ್ಯಕ್ಷ ವಿ.ವೈ.ರೆಡ್ಡಿ ಅವರ ನಡುವಿನ ಹಿಂಬಾಗಿಲ ಮಾತುಕತೆಗಳಲ್ಲಿ ಸಂಪರ್ಕ ಸೇತುವಾಗಿದ್ದರು.

14ನೇ ಹಣಕಾಸು ಆಯೋಗವು 2013ರಲ್ಲಿ ಸ್ಥಾಪನೆಗೊಂಡಿತ್ತು ಮತ್ತು ಸರಿ ಸುಮಾರು ಇದೇ ಸಮಯಕ್ಕೆ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಪ್ರಧಾನಿ ಹುದ್ದೆಗಾಗಿ ಲಾಬಿಯನ್ನು ಆರಂಭಿಸಿದ್ದರು. ರಾಜ್ಯಗಳಿಗೆ ಕೇಂದ್ರ ತೆರಿಗೆಗಳಲ್ಲಿ ಶೇ.50ರಷ್ಟು ಪಾಲನ್ನು ನೀಡಬೇಕು ಎಂದು ಪ್ರತಿಪಾದಿಸುವ ಮೂಲಕ ಅವರು ಆಗ ಸುದ್ದಿಯಾಗಿದ್ದರು. ಹಣಕಾಸು ಆಯೋಗವು 2014 ಡಿಸೆಂಬರ್‌ನಲ್ಲಿ ಸಲ್ಲಿಸಿದ್ದ ತನ್ನ ವರದಿಯಲ್ಲಿ ಆವರೆಗೆ ಶೇ.32ರಷ್ಟಿದ್ದ ರಾಜ್ಯ ಸರಕಾರಗಳ ಪಾಲನ್ನು ಶೇ.42ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತ್ತು. ಆದರೆ ಪ್ರಧಾನಿ ಮೋದಿ ರಾಜ್ಯಗಳ ಪಾಲನ್ನು ಶೇ.33ಕ್ಕೆ ತಗ್ಗಿಸಲು ಮತ್ತು ಹೆಚ್ಚಿನ ಪಾಲನ್ನು ಕೇಂದ್ರ ಸರಕಾರಕ್ಕೆ ಉಳಿಸಿಕೊಳ್ಳಲು ಹವಣಿಸಿದ್ದರು ಎನ್ನಲಾಗಿದೆ.

ಪ್ರಧಾನಿ ಮತ್ತು ಅವರ ತಂಡವು ಆರಂಭದಿಂದಲೂ ರಾಜ್ಯಗಳಿಗೆ ಹಣಕಾಸು ಹಂಚಿಕೆಯನ್ನು ಕುಗ್ಗಿಸಲು ಪ್ರಯತ್ನಿಸಿದ್ದರು ಎನ್ನುವುದನ್ನು ಇದೇ ಮೊದಲ ಬಾರಿಗೆ ಪ್ರಸ್ತುತ ಭಾರತ ಸರಕಾರದ ಉನ್ನತ ಅಧಿಕಾರಿಯೋರ್ವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ರಾಜ್ಯಗಳೂ ಈಗ ಪದೇ ಪದೇ ಈ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸುತ್ತಿವೆ.

ಎನ್‌ಜಿಒ ಸೆಂಟರ್ ಫಾರ್ ಸೋಷಿಯಲ್ ಆ್ಯಂಡ್ ಇಕನಾಮಿಕ್ ಪ್ರೊಗ್ರೆಸ್ (ಸಿಎಸ್‌ಇಪಿ) ಆಯೋಜಿಸಿದ್ದ ಭಾರತದಲ್ಲಿ ಹಣಕಾಸು ವರದಿಗಾರಿಕೆ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಪ್ಯಾನೆಲಿಸ್ಟ್ ಆಗಿ ಪಾಲ್ಗೊಂಡಿದ್ದ ಸುಬ್ರಹ್ಮಣ್ಯಂ ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

‘ಆ ವರ್ಷ (2014) ಬಜೆಟ್‌ ಅನ್ನು ಎರಡು ದಿನಗಳಲ್ಲಿ ಬರೆಯಲಾಗಿತ್ತು. ಎರಡು ದಿನಗಳಲ್ಲಿ ಏಕೆಂದರೆ ರಾಜ್ಯಗಳಿಗೆ ತೆರಿಗೆ ಪಾಲು ಕುರಿತು ಶಿಫಾರಸುಗಳನ್ನು ಬಹಳ ತಡವಾಗಿ ಒಪ್ಪಿಕೊಳ್ಳಲಾಗಿತ್ತು ಮತ್ತು ಆ ಸಮಯದಲ್ಲಿ ಎಲ್ಲವನ್ನೂ ಬರೆಯಲಾಗಿತ್ತು. ನೀತಿ ಆಯೋಗದ ಕಾನ್ಫರೆನ್ಸ್ ರೂಮಿನಲ್ಲಿ ನಾವು ಕುಳಿತುಕೊಂಡು ಇಡೀ ಬಜೆಟ್‌ನ್ನು ಮರು ರೂಪಿಸಿದ್ದೆವು’ ಎಂದು ಸುಬ್ರಹ್ಮಣ್ಯಂ ನೆನಪಿಸಿಕೊಂಡರು.

‘ನಾವು ಹಣಕಾಸು ಕಡಿತಗೊಳಿಸಿದ್ದು ಇನ್ನೂ ನೆನಪಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ 36,000 ಕೋಟಿ ರೂ.ಗಳ ಹಂಚಿಕೆಯನ್ನು 18,000 ಕೋಟಿ ರೂ.ಗೆ ಇಳಿಸಲಾಗಿತ್ತು’ ಎಂದರು. ಮಕ್ಕಳು, ಗರ್ಭಿಣಿಯರು ಮತ್ತು ಹಾಲೂಡಿಸುವ ತಾಯಂದಿರಿಗೆ ಬಿಸಿ ಊಟವನ್ನು ಪೂರೈಸುವಂತಹ ಕಲ್ಯಾಣ ಯೋಜನೆಗಳನ್ನು ಈ ಸಚಿವಾಲಯವು ನಿರ್ವಹಿಸುತ್ತದೆ.

ಕೇಂದ್ರ ಬಜೆಟ್‌ಗಳು ಸತ್ಯವನ್ನು ಬಚ್ಚಿಡಲು ಹೇಗೆ ಪದರಗಳಿಂದ ಆವೃತವಾಗಿರುತ್ತವೆ ಎನ್ನುವುದನ್ನು ಅವರು ಹಂಚಿಕೊಂಡರು. ಸರಕಾರದ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿರುವುದು ಕೂಡ ಪ್ರಥಮವಾಗಿದೆ.

ವಿದೇಶಿ ಬ್ಯಾಂಕುಗಳು ಮತ್ತು ಹೂಡಿಕೆದಾರರು ಭಾರತ ಸರಕಾರದ ಲೆಕ್ಕಗಳ ವಿಶ್ಲೇಷಣೆಯಲ್ಲಿ ದೇಶಿಯ ತಜ್ಞರಿಗಿಂತ ಹೆಚ್ಚು ಪ್ರಾಮಾಣಿಕರಾಗಿದ್ದಾರೆ ಎಂದ ಸುಬ್ರಹ್ಮಣ್ಯಂ, ಜೆಪಿ ಮಾರ್ಗನ್ ಮತ್ತು ಸಿಟಿಬ್ಯಾಂಕ್‌ಗಳಂತಹ ಸಂಸ್ಥೆಗಳ ಬಜೆಟ್ ವಿಶ್ಲೇಷಣೆಯು ವಾಸ್ತವದಲ್ಲಿ ನೈಜ ಸ್ಥಿತಿ ಏನು ಎನ್ನುವ ಸತ್ಯವನ್ನು ಅನಾವರಣಗೊಳಿಸುತ್ತವೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಲದ ಮೊತ್ತವನ್ನು ಬಹಿರಂಗಗೊಳಿಸುವುದನ್ನು ತಪ್ಪಿಸಲು ಲೆಕ್ಕಾಚಾರದ ಕುತಂತ್ರಗಳು ಮತ್ತು ಕೆಲವೊಮ್ಮೆ ವಂಚಕ ವಿಧಾನಗಳನ್ನು ಬಳಸುವುದರಿಂದ ಅವುಗಳ ಬಜೆಟ್‌ಗಳು ನಂಬಲರ್ಹವಲ್ಲ ಎಂದೂ ಅವರು ಹೇಳಿದರು.

ಹಣಕಾಸು ಆಯೋಗವು ತನ್ನ ವರದಿಯನ್ನು ಬದಲಿಸುವಂತೆ ಮಾಡುವ ಮೂಲಕ ರಾಜ್ಯಗಳ ತೆರಿಗೆ ಪಾಲನ್ನು ಕಡಿಮೆಗೊಳಿಸಲು ಮೋದಿ ಸರಕಾರವು ಪ್ರಯತ್ನಿಸಿತ್ತಾದರೂ ಅದು ಸಾಧ್ಯವಿಲ್ಲ ಎನ್ನುವುದನ್ನು ಕಂಡುಕೊಂಡ ಬಳಿಕ ಅದು ಹಳೆಯ ಲೆಕ್ಕಪತ್ರ ತಂತ್ರವನ್ನು ಬಳಸಿಕೊಂಡಿತ್ತು ಮತ್ತು ಅದು ಈಗಲೂ ಮುಂದುವರಿದಿದೆ. ಅದು ಸೆಸ್ ಮತ್ತು ಸರ್ಚಾರ್ಜ್ ಗಳು ಎಂದು ಕರೆಯಲಾಗುವ ತೆರಿಗೆಗಳ ವರ್ಗದ ಸಂಗ್ರಹವನ್ನು ಕ್ರಮೇಣ ಹೆಚ್ಚಿಸುತ್ತಲೇ ಬಂದಿದೆ. ರಾಜ್ಯಗಳು ಇದರಲ್ಲಿ ಯಾವುದೇ ಪಾಲನ್ನು ಪಡೆಯಲು ಸಾಧ್ಯವಿಲ್ಲ.

ಹಣಕಾಸು ಸಂಗ್ರಹಿಸಲು ಅಥವಾ ಆದಾಯವನ್ನು ಹೆಚ್ಚಿಸಲು ಈ ಸೆಸ್‌ಗಳು ಮತ್ತು ಸರ್ಚಾರ್ಜ್‌ಗಳ ಬಳಕೆಯು ಹೆಚ್ಚುತ್ತಿದೆ ಎಂದು ಸುಬ್ರಹ್ಮಣ್ಯಂ ಹೇಳಿದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಸಂಗ್ರಹಿಸಿರುವ ಸೆಸ್ ಮತ್ತು ಸರ್ಚಾರ್ಜ್‌ಗಳು 2015ರಿಂದ ಹೆಚ್ಚುತ್ತಲೇ ಇವೆ ಎಂದು ದತ್ತಾಂಶಗಳು ತೋರಿಸಿವೆ.

ಸೆಸ್‌ಗಳು ಮತ್ತು ಸರ್ಚಾರ್ಜ್‌ಗಳು ಹೆಚ್ಚುತ್ತಲೇ ಇದ್ದು, ಅದರಲ್ಲಿ ರಾಜ್ಯ ಸರಕಾರಗಳು ಪಾಲು ಕೇಳುವಂತಿಲ್ಲ, ಹೀಗಾಗಿ ತೆರಿಗೆ ವಿಷಯದಲ್ಲಿ ತಮ್ಮ ಸ್ವಾಯತ್ತತೆಯನ್ನು ಸಡಿಲಿಸುವಲ್ಲಿ ಅವು ಜಾಗರೂಕತೆಯನ್ನು ವಹಿಸುತ್ತವೆ ಎಂದು ಹೇಳಿದ ಸುಬ್ರಹ್ಮಣ್ಯಂ, ಮೋದಿ ಸರಕಾರವು ವರ್ಷಗಳ ರಾಜಕೀಯ ಹಗ್ಗಜಗ್ಗಾಟದ ಬಳಿ 2017 ಜುಲೈನಲ್ಲಿ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)ಯನ್ನು ಜಾರಿಗೆ ತರುವ ಮೂಲಕ ರಾಜ್ಯಗಳ ತೆರಿಗೆ ಸಂಪನ್ಮೂಲಗಳಿಗೆ ಕನ್ನ ಹಾಕಿದೆ. ಜಿಎಸ್‌ಟಿ ಹಲವಾರು ಸ್ಥಳೀಯ ತೆರಿಗೆಗಳ ಬದಲು ರಾಷ್ಟ್ರೀಯ ತೆರಿಗೆಗಳ ಮೂಲಕ ಏಕ ಮಾರುಕಟ್ಟೆಯನ್ನು ರಚಿಸುತ್ತದೆ ಎಂದು ಪರಿಗಣಿಸಲಾಗಿತ್ತು. ಆದರೆ ರಾಜ್ಯಗಳು ಆದಾಯಕ್ಕಾಗಿ ಹೆಚ್ಚೆಚ್ಚು ಪರದಾಡುವಂತಾಗಿದೆ ಎನ್ನುವ ಮೂಲಕ ಪ್ರತಿಪಕ್ಷಗಳ ಆಡಳಿತದ ರಾಜ್ಯ ಸರಕಾರಗಳು ಈ ಹಿಂದೆ ವ್ಯಕ್ತಪಡಿಸಿದ್ದ ಕಳವಳವನ್ನು ಪ್ರತಿಧ್ವನಿಸಿದರು.

ಜಿಎಸ್‌ಟಿ ಪೂರ್ವದ ಅವಧಿಗೆ ಹೋಲಿಸಿದರೆ ಜಿಎಸ್‌ಟಿ ಜಾರಿಯ ಬಳಿಕ ರಾಜ್ಯಗಳ ತೆರಿಗೆ ಆದಾಯವು ಕ್ಷೀಣಿಸಿದೆ ಎಂದು ಇತ್ತೀಚಿನ ಸಂಶೋಧನಾ ಪ್ರಬಂಧಗಳು ಬೆಟ್ಟು ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News