ನ. 2ರ ವರೆಗೆ ಪ್ರಬೀರ್ ಪುರಕಾಯಸ್ತ, ಅಮಿತ್ ಚಕ್ರವರ್ತಿಗೆ ಪೊಲೀಸ್ ಕಸ್ಟಡಿ
ಹೊಸದಿಲ್ಲಿ: ‘ನ್ಯೂಸ್ ಕ್ಲಿಕ್’ ಸಂಸ್ಥಾಪಕ ಪ್ರಬೀರ್ ಪುರಕಾಯಸ್ತ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ದಿಲ್ಲಿ ನ್ಯಾಯಾಲಯ ನವೆಂಬರ್ 2ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಸುದ್ದಿ ಪೋರ್ಟಲ್ ‘ನ್ಯೂಸ್ ಕ್ಲಿಕ್’ ಚೀನಾ ಪರ ಪ್ರಚಾರ ಮಾಡಲು ನಿಧಿ ಸ್ವೀಕರಿಸಿದೆ ಎಂದು ಆರೋಪಿಸಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.
ಈ ಹಿಂದೆ ನೀಡಲಾಗಿದ್ದ 15 ದಿನಗಳ ನ್ಯಾಯಾಂಗ ಬಂಧನ ಮುಗಿದ ಹಿನ್ನೆಲೆಯಲ್ಲಿ ಪ್ರಬೀರ್ ಪುರಕಾಯಸ್ತ ಹಾಗೂ ಅಮಿತ್ ಚಕ್ರವರ್ತಿ ಅವರನ್ನು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಮುಂದಿನ ದಿನಗಳಲ್ಲಿ ಕಸ್ಟಡಿ ವಿಚಾರಣೆಗೆ ಕೋರುವ ಸಾಧ್ಯತೆಯೊಂದಿಗೆ ಆರೋಪಿಗಳನ್ನು ಜೈಲಿನಲ್ಲಿ ಇರಿಸುವಂತೆ ಪೊಲೀಸರು ಅ.10ರಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಬುಧವಾರ ವಿಚಾರಣೆಯ ಸಂದರ್ಭ ಪೊಲೀಸರು ತನಿಖೆಯ ಭಾಗವಾಗಿ ಸಂರಕ್ಷಿತ ಸಾಕ್ಷಿಗಳ ಎದುರಲ್ಲಿ ಆರೋಪಿಗಳನ್ನು ಪ್ರಶ್ನಿಸುವ, ನಿರ್ದಿಷ್ಟ ಸಾಧನಗಳನ್ನು ಪರಿಶೀಲಿಸುವ ಹಾಗೂ ದತ್ತಾಂಶವನ್ನು ಸಂಗ್ರಹಿಸುವ ತಮ್ಮ ಉದ್ದೇಶವನ್ನು ನ್ಯಾಯಾಧೀಶರಿಗೆ ತಿಳಿಸಿದರು.
ಪುರಕಾಯಸ್ತ ಅವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ನ್ಯಾಯವಾದಿ ಅರ್ಷದೀಪ್ ಸಿಂಗ್ ಖುರಾನಾ ಅವರು ಪೊಲೀಸರ ರಿಮಾಂಡ್ ಅರ್ಜಿಯನ್ನು ವಿರೋಧಿಸಿದರು. ಈ ಅರ್ಜಿಗೆ ಯಾವುದೇ ಆಧಾರ ಇಲ್ಲ ಎಂದು ಅವರು ಹೇಳಿದರು.
ದಿಲ್ಲಿ ಪೊಲೀಸ್ ನ ವಿಶೇಷ ಘಟಕ ಪುರಕಾಯಸ್ತ ಹಾಗೂ ಚಕ್ರವರ್ತಿ ಅವರನ್ನು ಅ. 3ರಂದು ಬಂಧಿಸಿತ್ತು.