ವೈಎಸ್ಸಾರ್‌ ಕಾಂಗ್ರೆಸ್, ಆಪ್‌ ಮತ್ತಿತರರ ಆಯ್ದ ಪೋಸ್ಟ್‌ ತೆಗೆದುಹಾಕಲು ʼಎಕ್ಸ್‌ʼ ಗೆ ಚುನಾವಣಾ ಆಯೋಗ ಸೂಚನೆ

Update: 2024-04-17 08:22 GMT

ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣ ಎಕ್ಸ್‌ ಗೆ ವೈಎಸ್ಸಾರ್‌ ಕಾಂಗ್ರೆಸ್‌, ಆಪ್‌, ಎನ್‌ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್‌ ಚೌಧುರಿ ಅವರ ಕೆಲವೊಂದು ಆಯ್ದ ಪೋಸ್ಟ್‌ಗಳನ್ನು ತೆಗೆದುಹಾಕುವಂತೆ ಸೂಚಿಸಿದೆ. ಈ ಪೋಸ್ಟ್‌ಗಳು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತವೆ ಎಂಬ ಕಾರಣ ನೀಡಲಾಗಿದೆ ಎಂದು ಎಕ್ಸ್‌ ಇಂದು ಮಾಹಿತಿ ನೀಡಿದೆ.

ಎಪ್ರಿಲ್‌ 2 ಹಾಗೂ 3ರಂದು ಎಕ್ಸ್‌ ಗೆ ಆದೇಶ ನೀಡಲಾಗಿದ್ದು ಎಪ್ರಿಲ್‌ 10ರಂದು ಫಾಲೋ-ಅಪ್‌ ಇಮೇಲ್‌ ಕಳುಹಿಸಿ ಈ ಪೋಸ್ಟ್‌ಗಳನ್ನು ತೆಗೆದುಹಾಕದೇ ಇದ್ದಲ್ಲಿ ನಿಯಮಗಳ ಉಲ್ಲಂಘನೆಯಾಗಲಿದೆ ಎಂದು ಹೇಳಲಾಗಿತ್ತು.

ರಾಜಕಾರಣಿಗಳು ಅಥವಾ ಇತರ ಪಕ್ಷಗಳ ಕಾರ್ಯಕರ್ತರ ಖಾಸಗಿ ಜೀವನವನ್ನು ಉಲ್ಲೇಖಿಸುವುದನ್ನು, ಯಾವುದೇ ಆಧಾರರಹಿತ ಆರೋಪಗಳನ್ನು ಮಾಡುವುದನ್ನು ಅಥವಾ ವಾಸ್ತವವನ್ನು ತಿರುಚುವುದನ್ನು ಮಾದರಿ ನೀತಿ ಸಂಹಿತೆ ನಿಷೇಧಿಸುವುದರಿಂದ ಈ ಪೋಸ್ಟ್‌ಗಳು ಅದರ ಉಲ್ಲಂಘನೆಯಾಗಿದೆ ಎಂದು ಸೂಚನೆಯಲ್ಲಿ ಹೇಳಲಾಗಿದೆ. ಈ ಆದೇಶದಂತೆ ಪೋಸ್ಟ್‌ಗಳನ್ನು ತೆಗೆದುಹಾಕಲಾಗಿದೆಯಾದರೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಅಗತ್ಯವಿರುವುದರಿಂದ ಈ ಕ್ರಮಗಳ ಬಗ್ಗೆ ನಾವು ಒಪ್ಪುವುದಿಲ್ಲ,” ಎಂದು ಎಕ್ಸ್‌ ಹೇಳಿದೆ

ಯಾವ ಪೋಸ್ಟ್‌ಗಳನ್ನು ತೆಗೆದು ಹಾಕಲಾಗಿದೆ:

ಆಪ್‌ ಮಾರ್ಚ 18ರಂದು ಪ್ರಧಾನಿ ನರೇಂದ್ರ ಮೋದಿಯ ತಿರುಚಲ್ಪಟ್ಟ ಚಿತ್ರವೊಂದನ್ನು ಪೋಸ್ಟ್‌ ಮಾಡಿ ಎಲೆಕ್ಟೋರಲ್‌ ಬಾಂಡ್‌ ಪ್ರಕರಣವನ್ನು ಉಲ್ಲೇಖಿಸಿ “ಬಾಂಡ್‌ ಚೋರ್”‌ ಎಂಬ ಶೀರ್ಷಿಕೆ ನೀಡಿತ್ತು.

ಬಿಜೆಪಿ ನಾಯಕ ಹಾಗೂ ಬಿಹಾರ ಡೆಪ್ಯುಟಿ ಸಿಎಂ ಸಾಮ್ರಾಟ್‌ ಚೌಧುರಿ ಅವರು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅವರನ್ನು ಉಲ್ಲೇಖಿಸಿ “ಟಿಕೆಟ್‌ಗಳನ್ನು ಮಾರಾಟ ಮಾಡುವ ವಿಚಾರದಲ್ಲಿ ಅವರು ತಮ್ಮ ಪುತ್ರಿಯನ್ನೂ ಬಿಡದ ನಾಯಕರಾಗಿದ್ದಾರೆ,” ಎಂದು ವೀಡಿಯೋವೊಂದರಲ್ಲಿ ಹೇಳಿದ್ದರು.

ವಿಶಾಖಪಟ್ಟಣಂನಲ್ಲಿ ಮಾರ್ಚ್‌ 16ರಂದು ಡ್ರಗ್ಸ್‌ ಪ್ರಕರಣದ ಕುರಿತು ವೈಎಸ್ಸಾರ್‌ ಪಕ್ಷವು ಟಿಡಿಪಿಯನ್ನು ಟಾರ್ಗೆಟ್‌ ಮಾಡಿತ್ತು. “ಇಷ್ಟು ದಿನಗಳ ಕಾಲ ನಾವು ಟಿಡಿಪಿ ಎಂದರೆ ತೆಲುಗು ಡೊಂಗಲ (ಕಳ್ಳರ) ಪಕ್ಷ ಎಂದು ತಿಳಿದಿದ್ದೆವು. ಆದರೆ ಈ ಡ್ರಗ್ಸ್‌ ವಶಪಡಿಸಿಕೊಂಡ ಪ್ರಕರಣದ ನಂತರ ಅದು ತೆಲುಗು ಡ್ರಗ್ಸ್‌ ಪಾರ್ಟಿ ಎಂದು ತಿಳಿಯಿತು,” ಎಂದು ಟ್ವೀಟ್‌ ಮಾಡಿತ್ತು.

ಇದೇ ವಿಚಾರದಲ್ಲಿ ಚಂದ್ರಬಾಬು ನಾಯ್ಡು ಅವರ ಟ್ವೀಟ್‌ ಅನು ತೆಗೆದುಹಾಕಲೂ ಚುನಾವಣಾ ಆಯೋಗ ಸೂಚಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News