ದಿಲ್ಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ: ನಿರ್ಣಾಯಕ ಡೇಟಾವನ್ನು ಹಂಚಿಕೊಳ್ಳುವುದನ್ನು ನಿಲ್ಲಿಸಿದ ಏಜೆನ್ಸಿಗಳು

Update: 2023-10-27 06:33 GMT

File Photo (PTI)

ಹೊಸದಿಲ್ಲಿ: ರಾಷ್ಟ್ರರಾಜಧಾನಿಯಲ್ಲಿ ಮಾಲಿನ್ಯ ಹೆಚ್ಚುತ್ತಿರುವ ಬೆನ್ನಲ್ಲೇ ದಿಲ್ಲಿ ಸರ್ಕಾರ ಹಾಗೂ ಆಡಳಿತಯಂತ್ರದ ಒಳಜಗಳದ ಕಾರಣದಿಂದ ಕಾನ್ಪುರ ಐಐಟಿ ಕೈಗೊಂಡಿರುವ ರಿಯಲ್‍ಟೈಮ್ ಮೂಲ ಹಂಚಿಕೆ ಅಧ್ಯಯನಕ್ಕೆ ಅಕ್ಟೋಬರ್ 18ರಿಂದ ತಡೆ ಒಡ್ಡಲಾಗಿದೆ. ಕೇಂದ್ರ ಸರ್ಕಾರದ ಭೂವಿಜ್ಞಾನಗಳ ಸಚಿವಾಲಯ ಕೂಡಾ ಮಾಲಿನ್ಯ ಮೂಲಗಳ ಮಾಹಿತಿಯನ್ನು ಸ್ಥಗಿತಗೊಳಿಸಿದೆ.

ಮಾಲಿನ್ಯದ ವಿರುದ್ಧ ಕಾರ್ಯತಂತ್ರವನ್ನು ರೂಪಿಸಲು ಮತ್ತು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಮಾಲಿನ್ಯ ಮೂಲಗಳ ಬಗೆಗಿನ ಅಂಕಿ ಅಂಶಗಳು ಅಗತ್ಯ ಎಂದು, ಈ ನಿಟ್ಟಿನಲಿ ಪಾರದರ್ಶಕ ವ್ಯವಸ್ಥೆ ಇರಬೇಕು ಎಂದು ಪ್ರತಿಪಾದಿಸುವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಿಸ್ಟಂ ಆಫ್ ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್‍ಕಾಸ್ಟಿಂಗ್ ಅಂಡ್ ರೀಸರ್ಚ್ (ಸಫರ್) ಮತ್ತು ಡಿಸಿಷನ್ ಸಪೋಟ್ ಸಿಸ್ಟಂ, ಈ ತಿಂಗಳ ಆರಂಭದಿಂದಲೇ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಳ್ಳುವುದನ್ನು ಸ್ಥಗಿತಗೊಳಿಸಿವೆ.

ದೆಹಲಿಯ ಪಿಎಂ2.5 ಮಾಲಿನ್ಯಕಾರಕರ ಅಂಶದಲ್ಲಿ ಬೆಳೆತ್ಯಾಜ್ಯಗಳನ್ನು ಸುಡುವ ಅಂಶಗಳು ಎಷ್ಟರ ಮಟ್ಟಿಗೆ ಸೇರಿವೆ ಎನ್ನುವ ಅಂಶವನ್ನು ಸಫರ್ ವೆಬ್‍ಸೈಟ್ ಅಕ್ಟೋಬರ್ 11 ಹಾಗೂ 12ರಂದು ಬಿಡುಗಡೆ ಮಾಡಿತ್ತು. ಆದರೆ 13 ರಿಂದ ಈ ಮಾಹಿತಿ ಸ್ಥಗಿತಗೊಳಿಸಿದೆ. 2017ರಿಂದೀಚೆಗೆ ಸಫರ್ ಈ ಮಾಹಿತಿಯನ್ನು ನೀಡುತ್ತಿತ್ತು. ಇತರ ಮಾಲಿನ್ಯಕಾರಕ ಅಂಶಗಳ ಬಗ್ಗೆಯೂ ಮಾಹಿತಿ ಲಭ್ಯವಾಗುತ್ತಿತ್ತು.

ಅಂತೆಯೇ ಡಿಎಸ್‍ಎಸ್ ಕೂಡಾ ದೆಹಲಿಯ 19 ಎನ್‍ಸಿಆರ್ ಜಿಲ್ಲೆಗಳಲ್ಲಿ ರಾಜಧಾನಿಯ ಪಿಎಂ2.5 ಮಾಲಿನ್ಯಕಾರಕ ಅಂಶಗಳಿಗೆ ಮಾಲಿನ್ಯಕಾರಕ ಮೂಲಗಳ ಕೊಡುಗೆ ಮಾಹಿತಿಯನ್ನು ನೀಡುತ್ತಿತ್ತು. ಇದು ಕೂಡಾ ಮಂಗಳವಾರದಿಂದೀಚೆಗೆ ಮಾಹಿತಿ ಹಂಚಿಕೊಳ್ಳುತ್ತಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News