ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮೀ ಯೋಜನೆಗೆ ಸಂಪುಟ ಅನುಮೋದನೆ
ಹೊಸದಿಲ್ಲಿ : ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮೀ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಹಣದ ಕೊರತೆಯಿಂದ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಈ ಯೋಜನೆಯ ಪ್ರಕಾರ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಕ್ಯುಎಚ್‌ಇಐಗಳು) ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಬ್ಯಾಂಕ್ ಹಾಗೂ ಹಣಕಾಸಿನ ಸಂಸ್ಥೆಗಳಿಂದ ಯಾವುದೇ ಭದ್ರತೆ ಇಲ್ಲದೆ ಸಾಲ ದೊರೆಯಲಿದೆ. ವಿದ್ಯಾರ್ಥಿಗಳ ಬೋಧನಾ ಶುಲ್ಕ ಹಾಗೂ ಇತರ ವೆಚ್ಚ ಸೇರಿದಂತೆ ಅವರು ಆಯ್ಕೆ ಮಾಡಿಕೊಂಡ ಕೋರ್ಸ್‌ನ ವೆಚ್ಚವನ್ನು ಈ ಯೋಜನೆ ಭರಿಸಲಿದೆ ಎಂದು ಅವರು ತಿಳಿಸಿದ್ದಾರೆ.
►ಯೋಜನೆಯ ಮುಖ್ಯಾಂಶಗಳು
ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮೀ ಯೋಜನೆ ಭಾರತದಾದ್ಯಂತದ ಅತ್ಯುನ್ನತ 860 ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲು ರೂಪಿಸಲಾಗಿದೆ. ಇದು ವಾರ್ಷಿಕ 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಲುಪುತ್ತದೆ.
7.5 ಲಕ್ಷ ರೂ. ವರೆಗಿನ ಸಾಲಗಳಿಗೆ ಸಾಲದ ಮೊತ್ತ ಶೇ. 75ಕ್ಕೆ ಕೇಂದ್ರ ಸರಕಾರದ ಖಾತರಿ ನೀಡಲಿದೆ. ಇದು ಹೆಚ್ಚಿನ ವಿದ್ಯಾರ್ಥಿಗಳಿಗೆ ಸಾಲ ನೀಡುವಂತೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ಉತ್ತೇಜನ ನೀಡಿದಂತಾಗಿದೆ.
ಈ ಯೋಜನೆ ಪೂರ್ಣ ಪ್ರಮಾಣದ ಡಿಜಿಟಲ್, ಪಾರದರ್ಶಕಕ ಹಾಗೂ ವಿದ್ಯಾರ್ಥಿ ಸ್ನೇಹಿ ಪೋರ್ಟಲ್ ಮೂಲಕ ನಿರ್ವಹಣೆಯಾಗಲಿದೆ. ಅಲ್ಲದೆ, ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳ ವಿದ್ಯಾರ್ಥಿಗಳು 10 ಲಕ್ಷ ರೂ.ವರೆಗೆ ಸಾಲ ಪಡೆದುಕೊಂಡರೆ ಹಾಗೂ ಅವರು ಇತರ ಯಾವುದೇ ಸರಕಾರಿ ಶಿಷ್ಯ ವೇತನ ಅಥವಾ ಸಬ್ಸಿಡಿಗೆ ಅರ್ಹರಾಗಿರದಿದ್ದರೆ ಸಾಲ ಮರು ಪಾವತಿ ಇಲ್ಲದ ಅವಧಿಯಲ್ಲಿ ಅವರಿಗೆ ಶೇ. 6 ಬಡ್ಡಿ ವಿನಾಯತಿ ನೀಡಬಹುದಾಗಿದೆ.
ಈ ಯೋಜನೆ 2024-25ರಿಂದ 2030-31ರ ಅವಧಿಯಲ್ಲಿ ರೂ. 3,600 ಕೋಟಿ ರೂ. ಮಂಜೂರು ಮಾಡಲಿದೆ. ಈ ಅವಧಿಯಲ್ಲಿ 7 ಲಕ್ಷ ಹೊಸ ವಿದ್ಯಾರ್ಥಿಗಳು ಈ ಬಡ್ಡಿ ರಿಯಾಯತಿ ಲಾಭವನ್ನು ಪಡೆಯುವ ನಿರೀಕ್ಷೆ ಇದೆ.