ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಅಂತ್ಯ; ಹೊಸ ಸರ್ಕಾರದ ರಚನೆಗೆ ದಾರಿ ಸುಗಮ

Update: 2024-10-14 05:47 GMT

Photo credit: PTI

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ರವಿವಾರ ಹಿಂಪಡೆಯಲಾಗಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ರಾಷ್ಟ್ರಪತಿ ಆಡಳಿತ ಹಿಂದೆಗೆತ ಅಧಿಸೂಚನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟ ಜಯಭೇರಿ ಬಾರಿಸಿದ್ದು, ಸರ್ಕಾರ ರಚನೆಗೆ ಸಜ್ಜಾಗಿದೆ.

ಎನ್‌ಸಿ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. ಈಗಾಗಲೇ ಮೈತ್ರಿಕೂಟದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಔಪಚಾರಿಕವಾಗಿ ವಿಭಜಿಸಿದ ನಂತರ ಅಕ್ಟೋಬರ್ 31, 2019 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಆಡಳಿತವನ್ನು ಹೇರಲಾಯಿತು.

ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, 2019 ಅನ್ನು ಆಗಸ್ಟ್ 5, 2019 ರಂದು ಸಂಸತ್ತು ಅಂಗೀಕರಿಸಿತು. ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯನ್ನು ಆ ದಿನ ರದ್ದುಗೊಳಿಸಲಾಗಿತ್ತು.

ಅಕ್ಟೋಬರ್ 31, 2019 ರ ಮೊದಲು, ಬಿಜೆಪಿಯು ಪಿಡಿಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡಾಗ ಆಗಿನ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದ ನಂತರ ಜೂನ್ 2017 ರಿಂದ ರಾಜ್ಯದಲ್ಲಿ ಕೇಂದ್ರ ಆಡಳಿತವು ಮುಂದುವರೆದಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News