“ಪ್ರಧಾನಿ ನಿದ್ರಿಸುತ್ತಿದ್ದಾರೆ, ಮಣಿಪುರ ಹಿಂಸಾಚಾರವು ಭಾರತದ ಮಾನ ಕಳೆದಿದೆ”: ಬಿಜೆಪಿ ವಕ್ತಾರನಿಂದ ಪಕ್ಷಕ್ಕೆ ರಾಜೀನಾಮೆ

Update: 2023-07-27 16:41 GMT

ಬಿಜೆಪಿಯ ವಕ್ತಾರ ವಿನೋದ ಶರ್ಮಾ(ANI)

ಪಾಟ್ನಾ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ನಡೆಯುತ್ತಿರುವ ನಾಟಕೀಯ ಬೆಳವಣಿಗೆಯ ನಡುವೆಯೇ ಬಿಹಾರ ಬಿಜೆಪಿಯ ವಕ್ತಾರ ವಿನೋದ ಶರ್ಮಾ ಅವರು ಮಣಿಪುರದಲ್ಲಿಯ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಪಕ್ಷಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ತಾನು ಆತ್ಮಪ್ರಜ್ಞೆಯನ್ನು ಹೊಂದಿದ್ದೇನೆ ಮತ್ತು ಬಿಜೆಪಿ ನಾಯಕತ್ವದಡಿ ಕೆಲಸ ಮಾಡುವುದು ಕಳಂಕವೆಂದು ತಾನು ಭಾವಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಸುಮಾರು 800-1,000 ಪುರುಷರ ಉಪಸ್ಥಿತಿಯಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಘಟನೆಯು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಮಾನವನ್ನು ಕಳೆದಿದೆ ಎಂದು ಶರ್ಮಾ ಆರೋಪಿಸಿದರು. ಅನಾಗರಿಕ ಘಟನೆಯು ನಡೆದಿದ್ದರೂ,ಇಂತಹ ನೂರಾರು ಘಟನೆಗಳು ರಾಜ್ಯದಲ್ಲಿ ನಡೆದಿವೆ ಎಂಬ ಮಣಿಪುರ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಹೇಳಿಕೆಯ ಕುರಿತು ಅವರು ಆಘಾತವನ್ನು ವ್ಯಕ್ತಪಡಿಸಿದರು.

‘ಭಾರವಾದ ಹೃದಯದೊಂದಿಗೆ ನಾನು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಮಣಿಪುರ ಘಟನೆಯು ಭಾರತದ ಮಾನಹಾನಿಯನ್ನುಂಟು ಮಾಡಿದೆ ’ ಎಂದು ಶರ್ಮಾ ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರಗಳನ್ನೂ ಬರೆದಿರುವ ಶರ್ಮಾ,ಇಂತಹ ಘಟನೆ ಹಿಂದೆಂದೂ ಬೇರೆ ಎಲ್ಲಿಯೂ ನಡೆದಿಲ್ಲ ಎಂದು ಹೇಳಿದ್ದಾರೆ.

ಆದರೂ ಪ್ರಧಾನಿ ನಿದ್ರೆ ಮಾಡುತ್ತಿದ್ದಾರೆ. ಬಿರೇನ್ ಸಿಂಗ್ ರನ್ನು ವಜಾಗೊಳಿಸುವ ಧೈರ್ಯ ಅವರಿಗಿಲ್ಲ ಎಂದು ಶರ್ಮಾ ಹೇಳಿದರು.

ವಿಷಯದ (ಮಣಿಪುರ ಘಟನೆ) ಪರವಾಗಿ ಚರ್ಚಿಸುವಂತೆ ತನಗೆ ಸೂಚಿಸಲಾಗಿತ್ತು, ಆದರೆ ಅದನ್ನು ತಾನು ನಿರಾಕರಿಸಿದ್ದೆ ಎಂದು ಹೇಳಿದ ಶರ್ಮಾ, ‘ಪಕ್ಷದ ಯಾರೊಬ್ಬರೂ ನನ್ನ ಮಾತನ್ನು ಆಲಿಸುವುದಿಲ್ಲ ಎಂದು ಆಗ ನನಗೆ ಅರ್ಥವಾಗಿತ್ತು. ಅವರಿಗೆ ಅಧಿಕಾರದ ಲಾಲಸೆಯಿದೆ, ನಮ್ಮ ಹೆಣ್ಣುಮಕ್ಕಳು ಮತ್ತು ನಾಗರಿಕರ ಬಗ್ಗೆ ಅವರಿಗೆ ಚಿಂತೆಯಿಲ್ಲ’ ಎಂದು ಹೇಳಿದರು.

ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಜೆಡಿಯು, ಬಿಜೆಪಿ ನಾಯಕರೂ ಸಹ ತಮ್ಮ ಸರಕಾರದ ಬಗ್ಗೆ ನಾಚಿಕೆ ಪಡುತ್ತಿದ್ದಾರೆ ಎಂದು ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News