41,000 ಕೋಟಿ ರೂ.ಗಳ 2,000 ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ 41,000 ಕೋಟಿ ರೂ.ವೆಚ್ಚದಲ್ಲಿ 2,000 ರೈಲ್ವೆ ಮೂಲಸೌಕರ್ಯ ಯೋಜನೆಗಳಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು. ಇವು ಜನರಿಗೆ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.
ಅಮೃತ ಭಾರತ ನಿಲ್ದಾಣ ಯೋಜನೆಯಡಿ 553 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಿದ ಮೋದಿ ದೇಶಾದ್ಯಂತ 21,520 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ 1,500 ಅಂಡರ್ಪಾಸ್ ಗಳು ಮತ್ತು ಓವರ್ಬ್ರಿಡ್ಜ್ ಗಳನ್ನು ಉದ್ಘಾಟಿಸಿದರು. 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿಕೊಂಡಿರುವ 553 ನಿಲ್ದಾಣಗಳನ್ನು 19,000 ಕೋಟಿ ರೂ.ವೆಚ್ಚದಲ್ಲಿ ಪುನರಾಭಿವೃದ್ಧಿಗೊಳಿಸಲಾಗುತ್ತಿದೆ.
385 ಕೋಟಿ ರೂ.ವೆಚ್ಚದಲ್ಲಿ ಮರು ಅಭಿವೃದ್ಧಿಗೊಳಿಸಲಾದ ಉತ್ತರ ಪ್ರದೇಶದ ಗೋಮತಿ ನಗರ ರೈಲ್ವೆ ನಿಲ್ದಾಣವನ್ನೂ ಮೋದಿ ಉದ್ಘಾಟಿಸಿದರು.
ಇಂದು ರೈಲ್ವೆಗೆ ಸಂಬಂಧಿಸಿದ 2,000ಕ್ಕೂ ಅಧಿಕ ಯೋಜನೆಗಳಿಗೆ ಶಿಲಾನ್ಯಾಸ ನಡೆಸಲಾಗಿದೆ ಮತ್ತು ಉದ್ಘಾಟಿಸಲಾಗಿದೆ. ಈ ಸರಕಾರದ ಮೂರನೇ ಅವಧಿಯು ಜೂನ್ನಿಂದ ಆರಂಭಗೊಳ್ಳಲಿದೆ. ಆದರೆ ಕಾಮಗಾರಿಗಳು ಆರಂಭಗೊಂಡ ಪ್ರಮಾಣ ಮತ್ತು ವೇಗ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ ಎಂದು ಮೋದಿ ನುಡಿದರು.
‘ಇಂದಿನ ಕಾರ್ಯಕ್ರಮವು ನವಭಾರತದಲ್ಲಿ ಹೊಸ ಕಾರ್ಯ ಸಂಸ್ಕೃತಿಯ ಸಂಕೇತವಾಗಿದೆ. ಇಂದಿನ ಭಾರತವು ಸಣ್ಣ ಕನಸುಗಳನ್ನು ಕಾಣುವುದನ್ನು ನಿಲ್ಲಿಸಿದೆ,ನಾವು ದೊಡ್ಡ ಕನಸುಗಳನ್ನು ಕಾಣುತ್ತೇವೆ ಮತ್ತು ಅವುಗಳನ್ನು ನನಸಾಗಿಸಲು ಹಗಲಿರುಳು ಶ್ರಮಿಸುತ್ತೇವೆ. ಇದು ಈ ಅಭಿವೃದ್ಧ ಭಾರತದ ಸಂಕಲ್ಪವಾಗಿದೆ ’ಎಂದು ಅವರು ಹೇಳಿದರು.