ವಯನಾಡು ದುರಂತ: ಕೇಂದ್ರದ ಎಚ್ಚರಿಕೆಗಳನ್ನು ಕೇರಳ ಸರಕಾರ ನಿರ್ಲಕ್ಷಿಸಿದೆ ಎಂಬ ಅಮಿತ್‌ ಶಾ ಹೇಳಿಕೆ ವಿರುದ್ಧ ವಿಶೇಷ ಹಕ್ಕು ನೋಟಿಸ್ ಮಂಡನೆ

Update: 2024-08-01 07:28 GMT

ಅಮಿತ್‌ ಶಾ (Photo: PTI)

ಹೊಸದಿಲ್ಲಿ: ನೈಸರ್ಗಿಕ ವಿಕೋಪದ ಸಾಧ್ಯತೆಯ ಬಗ್ಗೆ ಕೇಂದ್ರದ ಎಚ್ಚರಿಕೆಗಳನ್ನು ಕೇರಳ ಸರ್ಕಾರ ನಿರ್ಲಕ್ಷಿಸಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆರೋಪದ ಬಗ್ಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸಂಸದ ವಿ ಶಿವದಾಸನ್ ಬುಧವಾರ ರಾಜ್ಯಸಭೆಯಲ್ಲಿ ವಿಶೇಷ ಹಕ್ಕು ನೋಟಿಸ್ ಮಂಡಿಸಿದ್ದು, ಅಮಿತ್‌ ಶಾ ಅವರು ರಾಜ್ಯಸಭೆಯ ದಾರಿತಪ್ಪಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕೇರಳದ ವಯನಾಡಿನ ಮೆಪ್ಪಾಡಿ ಪ್ರದೇಶದಲ್ಲಿ ಮಂಗಳವಾರ ಭಾರೀ ಭೂಕುಸಿತಗಳು ಸಂಭವಿಸಿದ್ದು, ಕನಿಷ್ಠ 256 ಜನರು ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಸುಮಾರು 220 ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ತಿಳಿಸಿದ್ದಾರೆ.

ಜುಲೈ 23 ರಂದು ಕೇರಳ ಸರ್ಕಾರಕ್ಕೆ ಎಚ್ಚರಿಕೆಯನ್ನು ಕಳುಹಿಸುವುದರ ಜೊತೆಗೆ, ಜುಲೈ 24 ಮತ್ತು ಜುಲೈ 25 ರಂದು ಭಾರತೀಯ ಹವಾಮಾನ ಇಲಾಖೆ ಹೆಚ್ಚುವರಿ ಎಚ್ಚರಿಕೆಗಳನ್ನು ನೀಡಿದೆ ಎಂದು ಶಾ ಬುಧವಾರ ಸಂಸತ್ತಿಗೆ ತಿಳಿಸಿದರು.

ಈ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್‌ ಶಾ ಅವರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಒಂಬತ್ತು ತಂಡಗಳನ್ನು ಜುಲೈ 23 ರಂದು ಕೇರಳಕ್ಕೆ ಕಳುಹಿಸಲಾಗಿದೆ, ಮಂಗಳವಾರ ಮೂರು ಹೆಚ್ಚುವರಿ ಘಟಕಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದರು. ಅಲ್ಲದೆ, ಕೇಂದ್ರ ಹವಾಮಾನ ಸಂಸ್ಥೆಯ ಎಚ್ಚರಿಕೆಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಹಾಗೂ ಕೇಂದ್ರೀಯ ವಿಪತ್ತು ನಿರ್ವಹಣಾ ತಂಡಗಳ ಆಗಮನಕ್ಕೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸಿಲ್ಲ ಎಂದು ಶಾ ಆರೋಪಿಸಿದ್ದರು.

ಆದರೆ, ಗೃಹ ಸಚಿವರ ಹೇಳಿಕೆಯನ್ನು ಕೇರಳ ಸರ್ಕಾರ ತಳ್ಳಿಹಾಕಿದೆ. ಈ ನಡುವೆ ಕೇರಳದ ಮೂವರು ಸಿಪಿಎಂ ಸಂಸದರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಖರ್ ಅವರಿಗೆ ಮನವಿ ಮಾಡಿದ್ದು, ಗೃಹಸಚಿವರ ಹೇಳಿಕೆಗಳನ್ನು ಸ್ಪಷ್ಟಪಡಿಸಲು ಅವರಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.

ಸಂಸದರಾದ ಜಾನ್ ಬ್ರಿಟ್ಟಾಸ್, ಎ ರಹೀಮ್ ಮತ್ತು ಶಿವದಾಸನ್ ಅವರು ಶಾ ಅವರ ಹೇಳಿಕೆಗಳು ವಾಸ್ತವಿಕವಾಗಿ ತಪ್ಪಾಗಿದೆ ಮತ್ತು ಅನಾವಶ್ಯಕ ಸಂಕಷ್ಟವನ್ನು ಉಂಟುಮಾಡುತ್ತದೆ, ಮಾತ್ರವಲ್ಲದೆ ರಾಜ್ಯದ ವೀರೋಚಿತ ಪ್ರಯತ್ನಗಳ ಬಗ್ಗೆ ವ್ಯತಿರಿಕ್ತವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News