ಕೋಲ್ಕತ್ತಾ | ದುರ್ಗಾ ಪೂಜೆ ಪೆಂಡಾಲ್ ಎದುರು ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಬಂಧಿಸಿದ ಕ್ರಮವನ್ನು ಖಂಡಿಸಿದ ಪ್ರಾಧ್ಯಾಪಕರು

Update: 2024-10-11 12:58 GMT

PC : PTI 

ಕೋಲ್ಕತ್ತಾ: ಸರಕಾರಿ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ದುರ್ಗಾ ಪೆಂಡಾಲ್ ಎದುರು ಪ್ರತಿಭಟನೆ ನಡೆಸಿದ ಒಂಬತ್ತು ವೈದ್ಯರನ್ನು ಬಂಧಿಸಿದ ಕ್ರಮವನ್ನು ಪ್ರಾಧ್ಯಾಪಕರ ಎರಡು ಸಂಘಟನೆಗಳು ಶುಕ್ರವಾರ ಖಂಡಿಸಿವೆ.

ಎರಡು ಪ್ರತ್ಯೇಕ ಹೇಳಿಕೆಗಳನ್ನು ಬಿಡುಗಡೆ ಮಾಡಿರುವ ಜಾಧವ್ ಪುರ್ ಯೂನಿವರ್ಸಿಟಿ ಟೀಚರ್ಸ್ ಅಸೋಸಿಯೇಷನ್ ಹಾಗೂ ಆಲ್ ಬೆಂಗಾಲ್ ಯೂನಿವರ್ಸಿಟಿ ಟೀಚರ್ಸ್ ಅಸೋಸಿಯೇಷನ್, ಬಂಧನಕ್ಕೀಡಾಗಿರುವ ವಿದ್ಯಾರ್ಥಿಗಳು ಹಾಗೂ ಕೊಳೆತು ನಾರುತ್ತಿರುವ ಆರೋಗ್ಯ ವ್ಯವಸ್ಥೆಯ ವಿರುದ್ಧ ಆಮರಣಾಂತ ಉಪವಾಸ ನಡೆಸುತ್ತಿರುವ ಕಿರಿಯ ವೈದ್ಯರಿಗೆ ಬೆಂಬಲ ನೀಡುವಂತೆ ಜನರಲ್ಲಿ ಮನವಿ ಮಾಡಿವೆ.

ದಕ್ಷಿಣ ಕೋಲ್ಕತ್ತಾದ ತ್ರಿಧಾರಾ ಸಮ್ಮಿಲನಿ ದುರ್ಗಾ ಪೂಜೆ ಪೆಂಡಾಲ್ ಬಳಿ ಬುಧವಾರ ಪ್ರತಿಭಟಿಸಿದ್ದ ಒಂಬತ್ತು ವಿದ್ಯಾರ್ಥಿಗಳ ಪೈಕಿ ಬಹುತೇಕರು ಜಾಧವ್ ಪುರ್ ವಿಶ್ವವಿದ್ಯಾಲಯಕ್ಕೆ ಸೇರಿದ ವಿದ್ಯಾರ್ಥಿಗಳಾಗಿದ್ದು, ಅವರೆಲ್ಲ ಪ್ರತಿಭಟನೆಯ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗಿ, ಕರಪತ್ರಗಳನ್ನು ಹಂಚಿದ್ದರು ಹಾಗೂ ಆರ್.ಜಿ.ಕರ್ ಆಸ್ಪತ್ರೆಯ ಮೃತ ವೈದ್ಯೆಗೆ ನ್ಯಾಯ ದೊರೆಯಬೇಕು ಎಂದು ಆಗ್ರಹಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಜಾಧವ್ ಪುರ್ ಯೂನಿವರ್ಸಿಟಿ ಟೀಚರ್ಸ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಪಾರ್ಥ ಪ್ರತಿಮ್ ರಾಯ್, “ಶಾಂತಿಯುತವಾಗಿ ಪ್ರತಿಭಟಿಸುತ್ತಾ, ನ್ಯಾಯಕ್ಕಾಗಿ ಮನವಿ ಮಾಡುತ್ತಿದ್ದ ನಮ್ಮ ಆತ್ಮೀಯ ವಿದ್ಯಾರ್ಥಿಗಳನ್ನು ಬಂಧಿಸಿರುವ ಕ್ರಮವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅತ್ಯಾಚಾರ ಮತ್ತು ಹತ್ಯೆಗೀಡಾಗಿರುವ ವೈದ್ಯೆ ಪ್ರಕರಣದ ಕುರಿತು ನ್ಯಾಯಯುತ ತನಿಖೆ ನಡೆಯಬೇಕು ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ಬಂಧನವಾಗಬೇಕು ಎಂಬುದು ಅವರ ಬೇಡಿಕೆಯಾಗಿದೆ. ಅವರಿಗೆ ಪ್ರತಿಭಟಿಸುವ ಎಲ್ಲ ಹಕ್ಕೂ ಇದೆ” ಎಂದು ಹೇಳಿದ್ದಾರೆ.

“ನಾವು ವಿದ್ಯಾರ್ಥಿಗಳ ಪರವಾಗಿದ್ದೇವೆ” ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿಗಳ ಬಂಧನವನ್ನು ಖಂಡಿಸಿರುವ ಆಲ್ ಬೆಂಗಾಲ್ ಯೂನಿವರ್ಸಿಟಿ ಟೀಚರ್ಸ್ ಅಸೋಷಿಯೇಷನ್ ನ ಪ್ರಧಾನ ಕಾರ್ಯದರ್ಶಿ ಗೌತಮ್ ಮೈತಿ, ಆಮರಣಾಂತ ಉಪವಾಸ ಕೈಗೊಂಡಿರುವ ಕಿರಿಯ ವಿದ್ಯಾರ್ಥಿಗಳ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ನಡುವೆ, ಗುರುವಾರ ಎಲ್ಲ ಬಂಧಿತ ಒಂಬತ್ತು ವಿದ್ಯಾರ್ಥಿಗಳನ್ನು ನ್ಯಾಯಾಲಯವು ಪೊಲೀಸರ ವಶಕ್ಕೆ ನೀಡಿದೆ. ಅವರೆಲ್ಲ ನಕ್ಸಲ್ ಪರ ಸಂಘಟನೆಯೊಂದರ ಸದಸ್ಯರು ಎಂದು ಪೊಲೀಸರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News