ನಾಸಿಕ್: ಫೈರಿಂಗ್ ಅಭ್ಯಾಸದ ವೇಳೆ ಶೆಲ್ ಸ್ಫೋಟ; ಇಬ್ಬರು ಅಗ್ನಿವೀರರು ಮೃತ್ಯು
ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಆರ್ಟಿಲರಿ ಸೆಂಟರ್ ನಲ್ಲಿ ಫೈರಿಂಗ್ ಅಭ್ಯಾಸದ ವೇಳೆ ಸ್ವದೇಶಿ ನಿರ್ಮಿತ ಫೀಲ್ಡ್ ಗನ್ ನಿಂದ ಶೆಲ್ ಸ್ಫೋಟಗೊಂಡು ಇಬ್ಬರು ಅಗ್ನಿವೀರರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಅಗ್ನಿವೀರರಾದ ಗೋಹಿಲ್ ವಿಶ್ವರಾಜ್ ಸಿಂಗ್ (20) ಮತ್ತು ಸೈಫತ್ ಶಿಟ್ (21) ಮೃತಪಟ್ಟಿದ್ದಾರೆ. ನಾಸಿಕ್ ರಸ್ತೆ ಪ್ರದೇಶದ ಆರ್ಟಿಲರಿ ಕೇಂದ್ರದಲ್ಲಿ ಈ ಘಟನೆ ಸಂಭವಿಸಿದೆ.
ಅಗ್ನಿವೀರ್ ಗಳ ತಂಡವು ಫೀಲ್ಡ್ ಗನ್ನಿಂದ ಗುಂಡು ಹಾರಿಸಿ ಅಭ್ಯಾಸ ಮಾಡುತ್ತಿದ್ದಾಗ ಒಂದು ಶೆಲ್ ಸ್ಫೋಟಗೊಂಡಿದೆ. ಈ ವೇಳೆ ಇಬ್ಬರು ಅಗ್ನಿವೀರರಿಗೆ ಗಾಯಗಳಾಗಿದ್ದು, ಅವರನ್ನು ಡಿಯೋಲಾಲಿಯ ಎಂಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಲ್ದಾರ್ ಅಜಿತ್ ಕುಮಾರ್ ನೀಡಿದ ದೂರಿನ ಮೇರೆಗೆ ದೇವಾಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.