ಕಳಂಕಿತ ಅಧಿಕಾರಿಗಳನ್ನು ಹುದ್ದೆಯಿಂದ ತೆಗೆಯಿರಿ: ಕೇಂದ್ರ ಕಾರ್ಯದರ್ಶಿಗಳಿಗೆ ಪ್ರಧಾನಿ ಮೋದಿ ಸೂಚನೆ

Update: 2024-10-11 11:55 GMT

ನರೇಂದ್ರ ಮೋದಿ | PTI

ಹೊಸ ದಿಲ್ಲಿ: ಕಳಂಕಿತ ಮತ್ತು ಅದಕ್ಷ ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದು ಹಾಕಲು ನಿಯಮಾವಳಿಗಳ ಪ್ರಕಾರ ನೌಕರರ ದಕ್ಷತೆಯ ಕುರಿತು ತೀವ್ರ ಮೌಲ್ಯಮಾಪ ನಡೆಸಬೇಕು. ಇದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಯಾವುದೇ ಸಿಬ್ಬಂದಿಯನ್ನು ನಿವೃತ್ತಿಗೊಳಿಸಲು ಸರಕಾರಕ್ಕೆ ಸಂಪೂರ್ಣ ಹಕ್ಕು ಪ್ರಾಪ್ತವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.

ಹರ್ಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಮರುದಿನ, ಬುಧವಾರದಂದು ಕೇಂದ್ರ ಸಚಿವರು ಹಾಗೂ ಕೇಂದ್ರ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಸಿಸಿಎಸ್ (ಪಿಂಚಣಿ) ನಿಯಮಗಳ ಮೂಲಭೂತ ನಿಯಮವಾದ 56(ಜೆ) ಅನ್ನು ಉಲ್ಲೇಖಿಸಿ, ಈ ನಿಯಮದ ಪ್ರಕಾರ, ಒಂದು ವೇಳೆ ಯಾವುದೇ ಉದ್ಯೋಗಿಯು ಸೇವೆಯಲ್ಲಿ ಮುಂದುವರಿಯಲು ಅನರ್ಹ ಎಂಬ ಅಭಿಪ್ರಾಯಕ್ಕೆ ಬಂದರೆ, ಅಂತಹ ಉದ್ಯೋಗಿಗಳನ್ನು ಸರಕಾರವು ನಿವೃತ್ತಗೊಳಿಸಬಹುದಾಗಿದೆ ಎಂಬುದರತ್ತ ಗಮನ ಸೆಳೆದರು ಎಂದು ವರದಿಯಾಗಿದೆ.

ಒಂದು ವೇಳೆ ಯಾವುದೇ ಉದ್ಯೋಗಿಯನ್ನು ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸುವುದಿದ್ದರೆ, ಸರಕಾರವು ಅಂತಹ ಉದ್ಯೋಗಿಗೆ ಮೂರು ತಿಂಗಳ ಪೂರ್ವಭಾವಿ ನೋಟಿಸ್ ನೀಡಬೇಕಾಗುತ್ತದೆ ಅಥವಾ ಮೂರು ತಿಂಗಳ ವೇತನ ನೀಡಬೇಕಾಗುತ್ತದೆ.

ಈ ನಿಯಮದಿಂದ 55 ವರ್ಷ ಮೇಲ್ಪಟ್ಟ ಉದ್ಯೋಗಿಗಳು ಬಾಧಿತರಾಗುವ ಸಾಧ್ಯತೆ ಇದೆ. ಇದೇ ರೀತಿ, ನಿಯಮ 48ರ ಪ್ರಕಾರ, ಯಾವುದೇ ಉದ್ಯೋಗಿ 30 ವರ್ಷದ ಸೇವಾವಧಿಯನ್ನು ಪೂರೈಸಿದ್ದರೆ, ಅಂತಹ ಉದ್ಯೋಗಿಯನ್ನು ನೇಮಕಾತಿ ಪ್ರಾಧಿಕಾರವು ಸಾರ್ವಜನಿಕ ಹಿತಾಸಕ್ತಿಯಿಂದ ನಿವೃತ್ತಿಗೊಳಿಸಬಹುದಾಗಿದೆ. ಅಂತಹ ಅಧಿಕಾರಿಗಳು ತಮ್ಮ ನಿವೃತ್ತಿಯ ಕುರಿತು ಪ್ರತಿಕ್ರಿಯಿಸಲು ಅವಕಾಶವಿರುತ್ತದೆ ಅಥವಾ ನ್ಯಾಯಾಲಯದಲ್ಲಿ ತಮ್ಮ ನಿವೃತ್ತಿಯನ್ನು ಪ್ರಶ್ನಿಸಲೂಬಹುದಾಗಿದೆ.

ಈ ನಿಯಮಗಳನ್ನು ಜಾರಿ ಮಾಡಿ ಕೇಂದ್ರ ಸರಕಾರವು ಇದುವರೆಗೆ 500ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಸೇವೆಯಿಂದ ನಿವೃತ್ತಿಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News