ಯುಜಿಸಿ ಸಹ ಪ್ರಾಧ್ಯಾಪಕ ಹುದ್ದೆಯ ಬಡ್ತಿ; ಷರತ್ತು ತೆಗೆದು ಹಾಕಲು ಪ್ರಧಾನಿಗೆ ಪತ್ರ ಬರೆದ ಎಚ್.ಡಿ.ದೇವೇಗೌಡ

Update: 2023-10-26 16:53 GMT

Photo- PTI

ಬೆಂಗಳೂರು: ಕೇಂದ್ರ ಸರ್ಕಾರವು ಯುಜಿಸಿ ಸಹ ಪ್ರಾಧ‍್ಯಾಪಕ ಹುದ್ದೆಗೆ ಬಡ್ತಿ ಪಡೆಯಲು ಕಡ್ಡಾಯವಾಗಿ ಪಿಎಚ್ಡಿ ಪದವಿಯನ್ನು ಪಡೆದಿರಬೇಕು, ಎಂದು ವಿಧಿಸಿರುವ ಶರತ್ತನ್ನು ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಗುರುವಾರ ಪತ್ರ ಬರೆದಿದ್ದಾರೆ.

ಜುಲೈ 31, 2023ರಂದು ಹೊರಡಿಸಿರುವ ಗೆಜೆಟ್ ತಿದ್ದುಪಡಿ ಅಧಿಸೂಚನೆಗೆ ಧನ್ಯವಾದ ಸಲ್ಲಿಸಿರುವ ಎಚ್.ಡಿ.ದೇವೇಗೌಡ, ಆ ಅಧಿಸೂಚನೆಯಲ್ಲಿ ಇನ್ನು ಆರು ತಿಂಗಳಲ್ಲಿ ಬಡ್ತಿ ಪಡೆಯಬೇಕಿರುವ ಅಭ್ಯರ್ಥಿಗಳಿಗೆ ಜನವರಿ 17, 2019ರ ಅರ್ಹತಾ ಷರತ್ತು ವಿಧಿಸಿರುವ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ವೃತ್ತಿ ಸುಧಾರಣೆ ಯೋಜನೆ (ಸಿಎಎಸ್) ಅಡಿಯಲ್ಲಿ ಸಹ ಪ್ರಾಧ್ಯಾಪಕರಾಗಲು ಬಯಸಿರುವ ಎಲ್ಲ ಅರ್ಹ ಅಭ್ಯರ್ಥಿಗಳ ಬಡ್ತಿಗೆ ಡಿಸೆಂಬರ್ 31, 2023ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಆದರೆ, ಜುಲೈ 31, 2023ರಂದು ಹೊರಡಿಸಿರುವ ಗೆಜೆಟ್ ಅಧಿಸೂಚನೆಯ 6.3ನೇ ಅಂಶದಲ್ಲಿ ಜನವರಿ 17, 2019ರಲ್ಲಿ ವಿಧಿಸಲಾಗಿರುವ ಷರತ್ತನ್ನು ಸೇರ್ಪಡೆ ಮಾಡಲಾಗಿದೆ. ಇದು ಡಿಸೆಂಬರ್ 31, 2023ರೊಳಗೆ ಸಹ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಪಡೆಯಬೇಕಿರುವ ಅರ್ಹ ಅಭ್ಯರ್ಥಿಗಳ ಸಂದಿಗ್ಧತೆಗೆ ಕಾರಣವಾಗಿದೆ. ಆದ್ದರಿಂದ, ಗೆಜೆಟ್ ಅಧಿಸೂಚನೆಯ 6.3ನೇ ಅಂಶದಲ್ಲಿ ನಮೂದಿಸಲಾಗಿರುವ ಜನವರಿ 17, 2019ರಲ್ಲಿ ವಿಧಿಸಲಾಗಿರುವ ಷರತ್ತನ್ನು ತೆಗೆದು ಹಾಕಿ, ಯುಜಿಸಿ ನಿಬಂಧನೆ 2010 ಅಥವಾ 2018ರ ನಡುವೆ ಡಿಸೆಂಬರ್ 31, 2023ರವರೆಗೆ ಯಾವುದೇ ಪೂರ್ವ ಷರತ್ತಿಲ್ಲದೆ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಅವಕಾಶವನ್ನು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಡಿಸೆಂಬರ್ 31, 2023ರವರೆಗೆ ಸಹ ಪ್ರಾಧ್ಯಾಪಕರಾಗಲು ಅರ್ಹರಾಗಿರುವ ಅಭ್ಯರ್ಥಿಗಳಿಗೆ ಪಿಎಚ್ಡಿ ಪದವಿಯನ್ನು ಕಡ್ಡಾಯಗೊಳಿಸದೇ ಅವರನ್ನು ಸಹ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಮಾಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News